ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಜಾಮೀನು

"ನಾವು ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆ ವರ್ಷಗಳು (ಆಕೆ ಜೈಲಿನಲ್ಲಿದ್ದ ಅವಧಿ) ತುಂಬಾ ದೀರ್ಘ ಸಮಯ” ಎಂದು ಪೀಠ ಹೇಳಿತು.
ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಜಾಮೀನು
Indrani Mukerjea, Supreme Court

2015ರಲ್ಲಿ ನಡೆದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾ ಅವರ ತಾಯಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

ಇಂದ್ರಾಣಿ ಅವರು ಕಳೆದ 6.5 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಪರಿಗಣಿಸಿತು.

"ನಾವು ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆ ವರ್ಷಗಳು (ಆಕೆ ಜೈಲಿನಲ್ಲಿದ್ದ ಅವಧಿ) ತುಂಬಾ ದೀರ್ಘ ಸಮಯ” ಎಂದು ಪೀಠ ಹೇಳಿತು.ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ಅವಲೋಕನ ಮಾಡುವುದಿಲ್ಲ. ಆದರೆ ವಿಚಾರಣೆ ಶೀಘ್ರದಲ್ಲೇ ಕೊನೆಯಾಗುವ ಸಾಧ್ಯತೆ ಇಲ್ಲ ಎಂದು ಅದು ವಿವರಿಸಿತು.

Also Read
ಬೋಸ್‌ ಕಣ್ಮರೆ ಸತ್ಯ ಶೋಧನಾ ಸಮಿತಿ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನಿಧನ

“…ಶೇ 50ರಷ್ಟು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ನಿಂದ ಕೈಬಿಟ್ಟರೂ, ವಿಚಾರಣೆ ಶೀಘ್ರದಲ್ಲೇ ಮುಗಿಯುವುದಿಲ್ಲ" ಎಂದ ನ್ಯಾಯಾಲಯವು, ಈ ಹಿನ್ನೆಲೆಯಲ್ಲಿ, "ಅವರಿಗೆ (ಇಂದ್ರಾಣಿಗೆ) ಜಾಮೀನು ನೀಡಲಾಗಿದೆ. ಅವರು ಬಿಡುಗಡೆಯಾಗುತ್ತಾರೆ. ಪೀಟರ್ ಮುಖರ್ಜಿ (ಪ್ರಕರಣದಲ್ಲಿ ಇಂದ್ರಾಣಿ ಅವರ ಎರಡನೇ ಪತಿ ಮತ್ತು ಉದ್ಯಮಿ) ಅವರಿಗೆ ವಿಧಿಸಲಾದ ಷರತ್ತುಗಳನ್ನೇ (ಇಂದ್ರಾಣಿ ಅವರಿಗೂ) ವಿಧಿಸಲಾಗುವುದು” ಎಂದು ಆದೇಶಿಸಿತು.

ಐಪಿಸಿ ಸೆಕ್ಷನ್‌ 120 ಬಿ (ಅಪರಾಧ ಪಿತೂರಿ), 364 (ಅಪಹರಣ), 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಮುಖರ್ಜಿ ಅವರನ್ನು 2015ರಲ್ಲಿ ಬಂಧಿಸಲಾಗಿತ್ತು. ಶೀನಾ ಅವರನ್ನು ಕಾರು ಚಾಲಕ ಶ್ಯಾಮ್‌ವರ್‌ ರೈ ಸಹಾಯದಿಂದ ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜಯ್‌ ಖನ್ನಾ, ಎರಡನೇ ಪತಿ ಪೀಟರ್‌ ಮುಖರ್ಜಿ ಕೊಂದಿದ್ದರು ಎಂದು ಸಿಬಿಐ ವಾದಿಸಿತ್ತು. ಇಂದ್ರಾಣಿ ಪರ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರೆ ಸಿಬಿಐಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com