ತಮ್ಮ ವಸತಿ ಗೃಹಗಳನ್ನು ತೆರವುಗೊಳಿಸುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್‌ನಿಂದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್ ಗುರುವಾರ ಮಧ್ಯಂತರ ರಕ್ಷಣೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಕಾಯಿದೆಯಡಿ ರೂಪುಗೊಂಡಿರುವ ನವದೆಹಲಿಯ ನ್ಯಾಯ ನಿರ್ಣಯ ಪ್ರಾಧಿಕಾರ ನೀಡಿದ ಆದೇಶದಂತೆ ತಮ್ಮ ವಸತಿ ಗೃಹಗಳನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಪ್ರಶ್ನಿಸಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರಿಗೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸದ್ಯಕ್ಕೆ ಮನೆ ತೆರವು ನೋಟಿಸ್ ಜಾರಿಗೊಳಿಸದಿರಲು ಇ ಡಿ ಸಮ್ಮತಿಸಿದ ಹಿನ್ನೆಲೆಯಲ್ಲಿ, ಪಿಎಂಎಲ್ಎ ಮೇಲ್ಮನವಿ ನ್ಯಾಯಮಂಡಳಿ ಎದುರಿರುವ ಅವರ ಮನವಿಯನ್ನು ನಿರ್ಧರಿಸುವವರೆಗೆ ಕುಂದ್ರಾ ಮತ್ತು ಶಿಲ್ಪಾ ಅವರಿಗೆ ಮಧ್ಯಂತರ ರಕ್ಷಣೆ ನೀಡುವುದಾಗಿ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರಿದ್ದ ಪೀಠ ತಿಳಿಸಿದೆ.
ಇದೇ ವೇಳೆ ಮೇಲ್ಮನವಿ ನ್ಯಾಯಮಂಡಳಿ ದಂಪತಿ ವಿರುದ್ಧ ಪ್ರತಿಕೂಲ ತೀರ್ಪು ನೀಡಿದರೆ ಆ ತೀರ್ಪನ್ನು ಎರಡು ವಾರಗಳವರೆಗೆ ಜಾರಿಗೆ ತರುವಂತಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಪುಣೆಯ ಪಾವನಾ ಅಣೆಕಟ್ಟೆ ಬಳಿ ಇರುವ ಬಂಗಲೆ ಮತ್ತು ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ದಂಪತಿಯ ಫ್ಲ್ಯಾಟ್ ತೆರವಿಗೆ ಸೂಚಿಸಿದ್ದ ನೋಟಿಸನ್ನು ದಂಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಕ್ರಿಪ್ಟೋ ಸ್ವತ್ತುಗಳನ್ನು ಒಳಗೊಂಡಿರುವ 'ಪೊಂಜಿ ಚೈನ್ ಲಿಂಕ್' ಯೋಜನೆಗೆ ಸಂಬಂಧಿಸಿದಂತೆ ಇ ಡಿ ದಂಪತಿಯ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ನೋಟಿಸ್ ನೀಡಿತ್ತು.
ವಕೀಲ ಪ್ರಶಾಂತ್ ಪಾಟೀಲ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ದಂಪತಿಗಳು ಮನೆ ತೆರವು ನೋಟಿಸ್‌ಗಳು "ಅರ್ಥಹೀನವಾಗಿದ್ದು, ನಿರ್ಲಕ್ಷ್ಯದ ಮತ್ತು ಸ್ವೇಚ್ಛಾನುಸಾರದ ಕ್ರಮವಾಗಿದೆ" ಎಂದುವಿವರಿಸಿದ್ದರು