ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ವಾರ್ಷಿಕ ದಸರಾ ಮೆರವಣಿಗೆ ಆಯೋಜಿಸಲು ಪಕ್ಷಕ್ಕೆ ಅನುಮತಿ ನೀಡುವುದಕ್ಕಾಗಿ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ನಿರ್ದೇಶಿಸಬೇಕು ಎಂದು ಕೋರಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಬಾಂಬೆ ಹೈಕೋರ್ಟ್ ಮೊರೆ ಹೋಗಿದೆ.
ವಕೀಲ ಜೋಯಲ್ ಕಾರ್ಲೋಸ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಕಮಲ್ ಖಾತಾ ಅವರಿದ್ದ ಪೀಠ ಒಪ್ಪಿಗೆ ಸೂಚಿಸಿದೆ.
ಶಿವಸೇನೆಯು 1966ರಿಂದ ಶಿವಾಜಿ ಪಾರ್ಕ್‌ನಲ್ಲಿ ʼದಸರಾ ಮೇಳವಾʼ (ಉತ್ಸವ) ನಡೆಸುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021 ರಲ್ಲಿ ಸಮಾವೇಶ ಆಯೋಜಿಸಿರಲಿಲ್ಲ. ರೂಢಿಯಂತೆ ಬರುವ ಅಕ್ಟೋಬರ್ 5ರಂದು ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಒಂದು ತಿಂಗಳು ಕಳೆದಿದ್ದರೂ ಪಾಲಿಕೆ ಇನ್ನೂ ಅದಕ್ಕೆ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.
ಹೀಗಾಗಿ ಅಕ್ಟೋಬರ್ 5 ರಂದು ಸಂಜೆ 5ರಿಂದ ರಾತ್ರಿ 10 ರವರೆಗೆ ತಾನು ನಡೆಸಲಿರುವ ಕಾರ್ಯಕ್ರಮಕ್ಕೆ 3 ದಿನಗಳೊಳಗೆ ಅನುಮತಿ ನೀಡುವಂತೆ ಬಿಎಂಸಿಗೆ ತಕ್ಷಣವೇ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇಷ್ಟೇ ಅಲ್ಲದೆ ಉದ್ಧವ್ ಬಣ ಹಾಗೂ ಏಕ್‌ನಾಥ್ ಶಿಂಧೆ ಬಣಗಳೆರಡೂ ಉತ್ಸವ ನಡೆಸಲು ಪರ್ಯಾಯ ಆಯ್ಕೆಯಾಗಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ಪ್ರದರ್ಶನ ಮೈದಾನದಲ್ಲಿ ಜಾಗ ಪಡೆಯಲು ಅರ್ಜಿ ಸಲ್ಲಿಸಿದ್ದವು. ಆ ಜಾಗ ಶಿಂಧೆ ಬಣದ ಪಾಲಾಗಿದೆ.