ಅಪ್ರಾಪ್ತರು ಸನ್ಯಾಸ ದೀಕ್ಷೆ ಪಡೆದುಕೊಳ್ಳಬಾರದು ಎಂಬುದಕ್ಕೆ ಕಾನೂನಿನ ತೊಡಕೇನಾದರು ಇದೆಯೇ ಎಂಬುದನ್ನು ಕರ್ನಾಟಕ ಹೈಕೋರ್ಟ್ ಪರಿಶೀಲಿಸಲಿದೆ.
ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತನನ್ನು ಮುಖ್ಯ ಮಠಾಧಿಪತಿಯನ್ನಾಗಿ ನೇಮಿಸಿರುವುದರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಉಡುಪಿಯ ಶ್ರೀ ಶಿರೂರು ಮಠ ಭಕ್ತ ಸಮಿತಿಯನ್ನು ಪ್ರತಿನಿಧಿಸಿರುವ ಪಿ ಲಾಥವ್ಯ ಆಚಾರ್ಯ ಹಾಗೂ ಮತ್ತಿತರರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ನಡೆಸಿತು.
“16 ವರ್ಷದ ಬಾಲಕ ಸ್ವಾಮಿ ಆಗುವುದನ್ನು ಕಾನೂನು ನಿರ್ಬಂಧಿಸುವುದೇ? ಬೌದ್ಧ ಧರ್ಮವನ್ನು ನೋಡಿ” ಎಂದು ಪೀಠ ಪ್ರಶ್ನಿಸಿತು. “ಮಗುವಿಗೆ ಎಷ್ಟು ವರ್ಷವಾಗಿದೆ? 16 ವರ್ಷದ ಬಾಲಕನನ್ನು ನೀವು ಮಗು ಎಂದು ಪರಿಗಣಿಸುವಿರಾ” ಎಂದು ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು.
ಆಗ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರದ ವಕೀಲರು “ಅಪ್ರಾಪ್ತರನ್ನು ಸ್ವಾಮಿಯನ್ನಾಗಿ ನೇಮಿಸಬಾರದು ಎಂದು ಯಾವ ಕಾನೂನು ಹೇಳುವುದಿಲ್ಲ” ಎಂದರು. ಆತ 21 ವರ್ಷ ದಾಟಿದ ಬಳಿಕ ಮದುವೆ ಇತ್ಯಾದಿ ವಿಚಾರಗಳನ್ನು ನಿರ್ಧರಿಸಲಾಗುತ್ತದೆ ಎಂದರು. “ಈ ಕುರಿತಾದ (ಮದುವೆ) ಆಯ್ಕೆ ಅವರಿಗೆ ಇದ್ದೇ ಇದೆ” ಎಂದು ಹೇಳಲಾಯಿತು
ಬಾಲಕ ಔಪಚಾರಿಕವಾಗಿ ಶಿಕ್ಷಣ ಪಡೆಯಬೇಕು ಎಂದು ಒತ್ತಾಯಿಸುವಂತಿಲ್ಲ. ಅವರಿಗೆ ಇಚ್ಛೆ ಇದ್ದರೆ ಗುರುಕುಲಕ್ಕೆ ತೆರಳಿ ಅಲ್ಲಿ ಅವರು ಉಪನಿಷತ್ ಅಧ್ಯಯನ ಮಾಡಬಹುದಾಗಿದೆ ಎಂದು ಪೀಠಕ್ಕೆ ವಿವರಿಸಲಾಯಿತು. ಆಗ ಪೀಠವು “12ನೇ ವಯಸ್ಸಿಗೆ ಶಂಕರಾಚಾರ್ಯರು ಸ್ವಾಮಿಗಳಾಗಿದ್ದರು” ಎಂದಿತು.
ಅರ್ಜಿದಾರರ ಪರ ವಕೀಲರು “ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಸಂವಿಧಾನದ ಅನುಸಾರ ಮಗುವಿನ ಮೇಲೆ ಐಹಿಕ ಭೋಗಗಳನ್ನು ತ್ಯಜಿಸುವುದನ್ನು ಬಲವಂತವಾಗಿ ಹೇರಬಹುದೇ? ಶೀಲಾ ಬಾರ್ಸೆ ತೀರ್ಪಿನ ಪ್ರಕಾರ ಈ ನಿರ್ಧಾರವನ್ನು ಪೋಷಕರೂ ತೆಗೆದುಕೊಳ್ಳಲಾಗದು” ಎಂದರು.
ಇದು ಅತ್ಯಂತ ಮಹತ್ವದ ವಿಚಾರ ಎಂದ ಪೀಠವು ಹಿರಿಯ ವಕೀಲ ಎಸ್ ಎಸ್ ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿ, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.
ಅಪ್ರಾಪ್ತ ಬಾಲಕನಿಗೆ ತಾನು ಕೈಗೊಳ್ಳುವ ಕೆಲಸ ಉಂಟುಮಾಡಬಹುದಾದ ಪರಿಣಾಮದ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ, ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯಾಗಿ ನೇಮಿಸಿರುವ ಸಂಬಂಧದ ತನ್ನ ನಿಲುವನ್ನು ರಾಜ್ಯ ಸರ್ಕಾರವು ಪುನರ್ ಪರಿಶೀಲಿಸಬೇಕು ಎಂದು ಕಳೆದ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿತ್ತು.