ಶಿವಸೇನೆಯ ಬಿಲ್ಲು- ಬಾಣದ ಚುನಾವಣಾ ಗುರುತನ್ನು ತನಗೆ ನೀಡದಿರುವುದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ತನ್ನನ್ನು ಪಕ್ಷಕಾರನನ್ನಾಗಿ ಮಾಡಿಕೊಳ್ಳಲಾಗದು ಎಂದು ಭಾರತ ಚುನಾವಣಾ ಆಯೋಗ (ಇಸಿಐ) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಉದ್ಧವ್ ಠಾಕ್ರೆ ಮತ್ತು ಏಕನಾಥ್‌ರಾವ್ ಸಾಂಭಾಜಿ ಶಿಂಧೆ ಮತ್ತಿತರರ ನಡುವಣ ಪ್ರಕರಣ].
ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿರುವ ಈ ಆದೇಶವನ್ನು ತಾನು ಅರೆ ನ್ಯಾಯಿಕ ಸಂಸ್ಥೆಯಾಗಿ ಜಾರಿಗೊಳಿಸಿದ್ದು ಇದು ಆಡಳಿತಾತ್ಮಕ ನಿರ್ಧಾರವಲ್ಲ ಎಂದು ಇಸಿಐ ಹೇಳಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ ಪಕ್ಷದ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸಲು ಅದಕ್ಕೆ ಹಕ್ಕು ನೀಡಿದ ಇಸಿಐ ಆದೇಶವನ್ನು ಪ್ರಶ್ನಿಸಿ ಉದ್ದವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಆಯೋಗ ಈ ಪ್ರತಿಕ್ರಿಯೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ಸುಪ್ರೀಂ ಕೋರ್ಟ್ ಪೀಠ ಈ ಹಿಂದೆ ಇಸಿಐ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು.
ಚಿಹ್ನೆಗಳ ಆದೇಶದ ಪ್ಯಾರಾ 15ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡುವ ತನ್ನ ಕರ್ತವ್ಯವನ್ನು ತಾನು ಈಗಾಗಲೇ ನಿರ್ವಹಿಸಿರುವುದರಿಂದ ಪ್ರಸ್ತುತ ಪ್ರಕರಣದಲ್ಲಿ ತಾನು ʼಫಂಕ್ಟಸ್ ಅಫಿಷಿಯೋ ʼ (ಕಾನೂನು ರೀತ್ಯಾ ಅಧಿಕಾರವನ್ನು ನಿರ್ವಹಿಸಿದ್ದು, ಮರುಪರಿಶೀಲಿಸುವ ಅಧಿಕಾರ ಹೊಂದಿಲ್ಲ) ಆಗಿದ್ದು, ಚುನಾವಣಾ ಆಯೋಗವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಅರೆ-ನ್ಯಾಯಿಕ ಸಂಸ್ಥೆ ನೀಡಿದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೆ ಆಗ ಅಂತಹ ಅರೆ ನ್ಯಾಯಿಕ ಸಂಸ್ಥೆಯನ್ನು ಮೇಲ್ಮನವಿಯಲ್ಲಿ ಪಕ್ಷಕಾರನನ್ನಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಇಸಿಐ ತಿಳಿಸಿದೆ.