ಶಿವಮೊಗ್ಗ ಸ್ಫೋಟ: ತನಿಖೆ, ಮುಂಜಾಗ್ರತಾ ಕ್ರಮ, ಪರಿಹಾರದ ಕುರಿತು ಸರ್ಕಾರದ ಪ್ರತಿಕ್ರಿಯೆ ಬಯಸಿದ ಕರ್ನಾಟಕ ಹೈಕೋರ್ಟ್‌

ಕ್ವಾರಿಯಲ್ಲಿ ಕಾಮಗಾರಿ ನಡೆಸಲು ಸ್ಫೋಟಕಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯಲ್ಲಿ ಜನವರಿ 21ರಂದು ಬೆಂಕಿ ಹೊತ್ತಿಕೊಂಡು ಸಿಡಿದಿದ್ದರಿಂದ ಎಂಟು ಮಂದಿ ಸಾವಿನ್ನಪ್ಪಿದ್ದ ಘಟನೆ ಶಿವಮೊಗ್ಗ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು.
High Court of Karnataka
High Court of Karnataka
Published on

ಶಿವಮೊಗ್ಗ ನಗರದ ಸಮೀಪ ಈಚೆಗೆ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ಅದನ್ನು ತಡೆಯುವ ಸಂಬಂಧ ತೆಗೆದುಕೊಳ್ಳಲು ಬಯಸಿರುವ ಮುಂಜಾಗ್ರತಾ ಕ್ರಮಗಳ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣವೇನು ಎಂಬುದನ್ನು ಅರಿಯುವ ಕುರಿತು ತನಿಖೆ ನಡೆಸಲು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.

“ತಾನು ತೆಗೆದುಕೊಳ್ಳಲು ಬಯಸಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸರ್ಕಾರ ವಿವರಿಸಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಸ್ಫೋಟಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದ್ದು ಅಂಥವರ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸುವಂತೆ ಕೋರಿ ವಕೀಲರಾದ ಡಾ. ಕೆ ಬಿ ವಿಜಯಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಕ್ವಾರಿಯಲ್ಲಿ ಕಾಮಗಾರಿ ನಡೆಸಲು ಸ್ಫೋಟಕಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡು ಸಿಡಿದಿದ್ದರಿಂದ ಜನವರಿ 21ರಂದು ಎಂಟು ಮಂದಿ ಸಾವಿನ್ನಪ್ಪಿದ್ದ ಘಟನೆ ಶಿವಮೊಗ್ಗ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಪ್ರಕರಣದಲ್ಲಿ ಹಲವು ಬಡ ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ, ನಿರ್ದಯತೆ, ಹೊಣೆಗಾರಿಕೆ ಇಲ್ಲದಿರುವುದು ಮತ್ತು ಆಡಳಿತ ವ್ಯವಸ್ಥೆಯಲ್ಲಿನ ತೀವ್ರ ರೀತಿಯ ಭ್ರಷ್ಟಾಚಾರದಿಂದಾಗಿ ಮುಂದೆ ಇಂಥ ಹಲವು ಘಟನೆಗಳು ಸಂಭವಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

Also Read
ಆಫ್‌ಲೈನ್‌ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆ ನಡೆಸುವ ಬಿಸಿಐ, ಕೆಎಸ್‌ಎಲ್‌ಯು ನಿರ್ಧಾರ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸುವುದು ಸಮಸ್ಯೆಗೆ ಪರಿಹಾರವಲ್ಲ. ಹೀಗೆ ಮಾಡುವುದರಿಂದ ಇಂಥ ಘಟನೆಗಳಿಗೆ ಸರ್ಕಾರಿ ವ್ಯವಸ್ಥೆಯು ಬೇಜವಾಬ್ದಾರಿಯುತಯಾಗಿ ವರ್ತಿಸುವುದನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಕ್ವಾರಿ ಮಾಡುವುದು ಒಂದು ಕ್ಲಸ್ಟರ್ ಚಟುವಟಿಕೆಯಾಗಿದ್ದು, ಗ್ರಾನೈಟ್‌ನ ದೊಡ್ಡ ಪರ್ವತ ಅಥವಾ ಗ್ರಾನೈಟ್ ಹೊಂದಿರುವ ಭೂಮಿಯನ್ನು ಕಲ್ಲುಗಣಿಗಾರಿಕೆ ಚಟುವಟಿಕೆ ನಡೆಸಲು ಪರವಾನಗಿ ನೀಡಲಾಗಿರುತ್ತದೆ. ಕಾನೂನುಬಾಹಿರ ಕ್ವಾರಿ ಚಟುವಟಿಕೆ ನಡೆಯುವುದರ ಬಗ್ಗೆ ನಮಗೆ ತಿಳಿವಳಿಕೆ ಇಲ್ಲ ಎಂದು ಹೇಳುವ ಅಧಿಕಾರಿಗಳ ವಾದವನ್ನು ಒಪ್ಪಿಕೊಳ್ಳಲಾಗದು,” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 304 (ಕೊಲೆಗೆ ಸಂಬಂಧಿಸಿಲ್ಲದ ದಂಡನೀಯ ನರಹತ್ಯೆ) ಮತ್ತು ಸೆಕ್ಷನ್‌ 425ರ ಅಡಿ ಪ್ರಕರಣ ದಾಖಲಿಸುವಂತೆ ಕೋರಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆಯೂ ಕೋರಲಾಗಿದೆ.

ಒಂದು ತಿಂಗಳ ಒಳಗಾಗಿ ಘಟನೆಯಲ್ಲಿ ಸಾವನ್ನಪ್ಪಿದ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ಪರಿಹಾರ ನೀಡುವ ಸಂಬಂಧ ಯೋಜನೆ ರೂಪಿಸಲು ಸರ್ಕಾರಕ್ಕೆ ಸೂಚಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

Kannada Bar & Bench
kannada.barandbench.com