
ಪ್ರಕರಣವೊಂದರಲ್ಲಿ ತಮ್ಮ ಕಕ್ಷಿದಾರರಿಗೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಸಮನ್ಸ್ ನೀಡಿದನ್ನು ತಿಳಿದು ತನಗೆ ಅಘಾತವಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಕೀಲರು ತಮ್ಮ ಕಕ್ಷಿದಾರರರೊಂದಿಗೆ. ಸಂವಹನ ನಡೆಸುವ ಸವಲತ್ತು ಪಡೆದಿದ್ದು ಅದನ್ನು ಬಹಿರಂಗಪಡಿಸದಂತೆ ರಕ್ಷಿಸಲಾಗಿದೆ. ಹೀಗಿದ್ದೂ ಅವರಿಗೆ ಸಮನ್ಸ್ ನೀಡಬಹುದೇ ಎಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಪ್ರಶ್ನಿಸಿತು.
“ವಕೀಲರಿಗೆ ಈ ರೀತಿ ಹೇಗೆ ಸಮನ್ಸ್ ನೀಡಬಹುದು? ಇದು ವಿಶೇಷ ಸಂವಹನ” ಎಂದು ಪೀಠ ಕೇಳಿತು.
ಕಾನೂನು ಸುದ್ದಿ ಜಾಲತಾಣಗಳಾದ ಬಾರ್ ಅಂಡ್ ಬೆಂಚ್ ಹಾಗೂ ಲೈವ್ ಲಾಗಳಲ್ಲಿ ಈ ಬಗ್ಗೆ ಪ್ರಕಟವಾದ ಸುದ್ದಿ ಓದಿ ಆಘಾತಗೊಂಡಿದ್ದೆ ಎಂದು ಸಿಜೆಐ ಗವಾಯಿ ಹೇಳಿದರು. ಈ ಬಗ್ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾನು ಚಿಂತಿಸುತ್ತಿರುವುದಾಗಿ ಇದೇ ವೇಳೆ ಪೀಠ ತಿಳಿಸಿತು.
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಪರ ವಾದ ಮಂಡಿಸುವ ವಕೀಲರಿಗೆ ತನಿಖಾ ಸಂಸ್ಥೆಗಳು ಸಮನ್ಸ್ ನೀಡುತ್ತಿರುವ ಕುರಿತಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ.
ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಮತ್ತು ಪ್ರಕರಣದ ಅಡ್ವೊಕೇಟ್ ಆನ್ ರೆಕಾರ್ಡ್ ಆಗಿದ್ದ ವೇಣುಗೋಪಾಲ್ ಅವರಿಗೆ ಇ ಡಿ ಸಮನ್ಸ್ ನೀಡಿತ್ತು. ಸಮನ್ಸ್ ನೀಡಿದ್ದಕ್ಕೆ ದೇಶಾದ್ಯಂತ ಬಲವಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಇ ಡಿ ಅದನ್ನು ಹಿಂಪಡೆದಿತ್ತು.
ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶನಾಲಯದ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ನಂತರ ಸುತ್ತೋಲೆ ಹೊರಡಿಸಿತ್ತು. ಭಾರತೀಯ ಸಾಕ್ಷ್ಯ ಅಧಿನಿಯಮ- 2023ರ ಸೆಕ್ಷನ್ 132ನ್ನು ಉಲ್ಲಂಘಿಸಿ ಸಮನ್ಸ್ ಜಾರಿ ಮಾಡದಂತೆ ಇ ಡಿ ತನ್ನ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.
ಆದರೂ ಸ್ವಯಂ ಪ್ರೇರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದಾಗಿತ್ತು. ಕಾರ್ಯಾಂಗ ವಕೀಲ ಸಮುದಾಯದ ಮೇಲೆ ಕಠೋರವಾಗಿ ನಡೆದುಕೊಂಡಿದೆ ಎಂದು ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಆಕ್ಷೇಪಿಸಿದರು.
ನೀವು ಮಾಡಿರುವುದು ತಪ್ಪು ಎಂದು ತಾನು ಕೂಡಲೇ ಇಡಿಗೆ ತಿಳಿಸಿದ್ದಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ತಿಳಿಸಿದರು.
ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರು, ತಾನು ಮಾಡಿದ್ದು ತಪ್ಪು ಎಂದು ಇ ಡಿಗೆ ತಕ್ಷಣವೇ ತಿಳಿಸಿರುವುದಾಗಿ ಹೇಳಿದರು. ಇದಕ್ಕೆ ದನಿಗೂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವೃತ್ತಿಪರ ಕಾನೂನು ಅಭಿಪ್ರಾಯ ನೀಡಿದ್ದಕ್ಕಾಗಿ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ ಎಂದರು. ಆದರೆ ಇ ಡಿ ವಿರುದ್ಧ ಸಂಕಥನವೊಂದನ್ನು ಕಟ್ಟಲು ಒಗ್ಗೂಡಿ ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ ಎಂತಲೂ ಮೆಹ್ತಾ ಗಮನಸೆಳೆದರು.
ಆದರೆ ಇ ಡಿ ರಾಜಕೀಯ ಪ್ರಕರಣಗಳಲ್ಲಿ ಕೈಯಾಡಿಸುತ್ತಿರುವ ಹಲವು ನಿದರ್ಶನಗಳನ್ನು ತಾನು ಕಂಡಿರುವುದಾಗಿ ಪೀಠ ನುಡಿಯಿತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಆರೋಪಿಯಾಗಿರುವ ಮುಡಾ ಪ್ರಕರಣ ಹಾಗೂ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಸಲ್ಲಸಿದ್ದ ಅರ್ಜಿಗಳನ್ನು ಇಂದು ಬೆಳಿಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇಂತಹ ಪ್ರಕರಣಗಳನ್ನು ರಾಜಕೀಯಗೊಳಿಸದಂತೆ ಎಚ್ಚರಿಕೆ ನೀಡಿತ್ತು.
ಈ ವಿಚಾರವನ್ನು ಪ್ರಸಕ್ತ ಪ್ರಕರಣದ ವಿಚಾರಣೆ ವೇಳೆಯೂ ನ್ಯಾಯಾಲಯ ಪ್ರಸ್ತಾಪಿಸಿತು. ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ತನಿಖಾ ಸಂಸ್ಥೆಗಳಿಂದ ವಕೀಲರಿಗೆ ಸಮನ್ಸ್ ನೀಡುವ ಕುರಿತಂತೆ ಮಾರ್ಗಸೂಚಿ ರೂಪಿಸಬೇಕಾಗುತ್ತದೆ ಎಂದಿತು. ಜುಲೈ 29ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.