ತನಿಖಾ ಸಂಸ್ಥೆಗಳಿಂದ ವಕೀಲರಿಗೆ ಸಮನ್ಸ್: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್

ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ ಡಿ) ಕೆಲ ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
Supreme Court
Supreme Court
Published on

ಕ್ರಿಮಿನಲ್ ಪ್ರಕರಣಗಳಲ್ಲಿಆರೋಪಿಗಳ ಪರ ವಾದ ಮಂಡಿಸುವ ವಕೀಲರಿಗೆ ತನಿಖಾ ಸಂಸ್ಥೆಗಳು ಸಮನ್ಸ್ ನೀಡುತ್ತಿರುವ ಕುರಿತಂತೆ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ.

"ಪ್ರಕರಣಗಳು ಮತ್ತು ಸಂಬಂಧಿತ ದಾವೆಗಳ ತನಿಖೆ ವೇಳೆ ಕಾನೂನು ಅಭಿಪ್ರಾಯ ನೀಡುವ ಅಥವಾ ಪಕ್ಷಕಾರರನ್ನು ಪ್ರತಿನಿಧಿಸುವ ವಕೀಲರಿಗೆ ಸಮನ್ಸ್" ಎನ್ನುವ ಶೀರ್ಷಿಕೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ಜುಲೈ 14ರಂದು ವಿಚಾರಣೆ ನಡೆಸಲಿದೆ.

Also Read
ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ಸುತ್ತೋಲೆ

ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ ಡಿ)  ಕೆಲ ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

Also Read
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ವಿವಿಧ ವಕೀಲರು, ಸಂಘಗಳ ಖಂಡನೆ

ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಮತ್ತು ಪ್ರಕರಣದ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಆಗಿದ್ದ ವೇಣುಗೋಪಾಲ್‌ ಅವರಿಗೆ ಇ ಡಿ ಸಮನ್ಸ್‌ ನೀಡಿತ್ತು. ಸಮನ್ಸ್‌ ನೀಡಿದ್ದಕ್ಕೆ ದೇಶಾದ್ಯಂತ ಬಲವಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಇ ಡಿ ಅದನ್ನು ಹಿಂಪಡೆದಿತ್ತು.

ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶನಾಲಯದ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ನಂತರ ಸುತ್ತೋಲೆ ಹೊರಡಿಸಿತ್ತು. ಭಾರತೀಯ ಸಾಕ್ಷ್ಯ ಅಧಿನಿಯಮ- 2023ರ ಸೆಕ್ಷನ್ 132ನ್ನು ಉಲ್ಲಂಘಿಸಿ ಸಮನ್ಸ್‌ ಜಾರಿ ಮಾಡದಂತೆ ಇ ಡಿ ತನ್ನ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.

Kannada Bar & Bench
kannada.barandbench.com