ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳ ಕೊರತೆ: ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಗದಗ, ಬಿಜಾಪುರ, ಗುಲ್ಬರ್ಗದಂತಹ ಹೆಚ್ಚು ನಗರೀಕರಣಕ್ಕೆ ಒಳಗಾಗದ, ಇಲ್ಲವೇ ದೊಡ್ಡ ನಗರಗಳಿಲ್ಲದ ಜಿಲ್ಲೆಗಳಲ್ಲೂ ಕೌಟುಂಬಿಕ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಈ ಮಾಹಿತಿ ತಿಳಿಸುತ್ತದೆ.
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳ ಕೊರತೆ: ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಕರ್ನಾಟಕದಲ್ಲಿ ಒಟ್ಟು 32 ಜಿಲ್ಲೆಗಳಿದ್ದರೂ ಕೌಟುಂಬಿಕ ನ್ಯಾಯಾಲಯಗಳಿರುವುದು ಕೇವಲ  22 ಜಿಲ್ಲೆಗಳಲ್ಲಿ ಎನ್ನುತ್ತಿದೆ ಮಾಹಿತಿ ಹಕ್ಕು ಕಾಯಿದೆಯಡಿ ಬಹಿರಂಗವಾದ ಒಂದು ವಿವರ. ಅಂದರೆ ರಾಜ್ಯದ ಇನ್ನೂ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳು ಈಗಲೂ ಅಸ್ತಿತ್ವದಲ್ಲಿಲ್ಲ.

ಹೆಚ್ಚುತ್ತಿರುವ ನಗರೀಕರಣ, ಜಟಿಲವಾಗುತ್ತಿರುವ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆ, ವಿಚ್ಚೇದನವೊಂದೇ ಪರಿಹಾರ ಎಂಬಂತಹ ಮನಸ್ಥಿತಿಯ ನಡುವೆ ಹಲವು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳು ಇಲ್ಲ ಎಂಬುದು ಸಾಧ್ಯವಾಗಬೇಕಾದ ನ್ಯಾಯಾಂಗ ಸುಧಾರಣೆಯತ್ತ ಬೆರಳು ಮಾಡುತ್ತದೆ. 

Also Read
ಕೌಟುಂಬಿಕ ನ್ಯಾಯಾಲಯಗಳು ವರ್ಷದೊಳಗೆ ವಿಚ್ಛೇದನ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು: ಹೈಕೋರ್ಟ್‌

ಮಾಹಿತಿ ಹಕ್ಕುಗಳ ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯದಲ್ಲಿರುವ ಕೌಟುಂಬಿಕ ನ್ಯಾಯಾಲಯಗಳು, ಅವುಗಳಲ್ಲಿ ಬಾಕಿ ಇರುವ ಪ್ರಕರಣಗಳು, ವಿಲೇವಾರಿಯಾದ ಪ್ರಕರಣಗಳ ವಿವರಗಳನ್ನು ಕೇಳಿದ್ದರು. ರಾಜ್ಯದ ಕೌಟುಂಬಿಕ ನ್ಯಾಯಾಲಯಗಳಲ್ಲಿ 2019ರ ಜುಲೈ 1ರಿಂದ 2023ರ ಮೇ 31ರವರೆಗೆ ವಿಲೇವಾರಿಯಾದ ಇಲ್ಲವೇ ಬಾಕಿ ಉಳಿದಿರುವ ಪ್ರಕರಣಗಳ ಬಗೆಗಿನ ಮಾಹಿತಿಯನ್ನು ಕರ್ನಾಟಕ ಹೈಕೋರ್ಟ್‌ನ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಜಂಟಿ ರಿಜಿಸ್ಟ್ರಾರ್ ನೀಡಿದ್ದಾರೆ.

ಆರ್‌ಟಿಐ ಮಾಹಿತಿ ನ್ಯಾಯಾಲಯಗಳ ಕೊರತೆಯನ್ನಷ್ಟೇ ಹೇಳುವುದಿಲ್ಲ. ಪ್ರಕರಣಗಳು ಬಾಕಿ ಉಳಿಯುವುದಕ್ಕೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇಲ್ಲದೇ ಇರುವುದು, ನ್ಯಾಯಾಲಯಗಳ ಮೆಟ್ಟಿಲೇರದೆಯೇ ರಾಜಿ ಸಂಧಾನಕ್ಕೆ ಅನುಕೂಲವಾಗುವಂತೆ ಮನಃಶಾಸ್ತ್ರದಲ್ಲಿ ಪದವಿ ಪಡೆದ ಸಮಾಲೋಚಕರ ನೇಮಕಾತಿ (ಈಗಿರುವುದು ಕೇವಲ ಸಮಾಲೋಚಕರು ಮನಃಶಾಸ್ತ್ರದಲ್ಲಿ ಪದವಿ ಪಡೆದ ಸಮಾಲೋಚಕರಲ್ಲ) ನಡೆಯದಿರುವುದು, ನಿಗದಿತ ಕಾಲಮಿತಿಯೊಳಗೆ ಪ್ರಕರಣಗಳು ಇತ್ಯರ್ಥವಾಗದೇ ಇರುವುದನ್ನು ವಿವರಿಸುತ್ತದೆ.

ಹೆಚ್ಚು ಜನದಟ್ಟಣೆ ಇರುವ, ಬಹಳಷ್ಟು ವಾಣಿಜ್ಯೀಕರಣಗೊಂಡ ಅತಿಹೆಚ್ಚು ಶಿಕ್ಷಿತರನ್ನು ಒಳಗೊಂಡ ನಗರಗಳಿರುವ ಜಿಲ್ಲೆಗಳು ಮಾತ್ರವಲ್ಲದೆ ಬಿಜಾಪುರ, ಗದಗ, ದಾವಣಗೆರೆ, ಬಾಗಲಕೋಟೆ, ಧಾರವಾಡದಂತಹ ಜಿಲ್ಲೆಗಳಲ್ಲೂ ಕೌಟುಂಬಿಕ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಮಾಹಿತಿಯಿಂದ ತಿಳಿದುಬರುತ್ತದೆ.

“ಸಾಮಾಜಿಕ, ಕೌಟುಂಬಿಕ ಸನ್ನಿವೇಶಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯೊಂದಕ್ಕೆ ಎರಡು ಮೂರು ಕೌಟುಂಬಿಕ ನ್ಯಾಯಾಲಯಗಳ ಅಗತ್ಯವಿದೆ. ಆದರೆ ರಾಜ್ಯದಲ್ಲಿ ಇನ್ನೂ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳ ಕೊರತೆ ಕಂಡುಬರುತ್ತಿದೆ. ನ್ಯಾಯಾಲಯಗಳ ಸಂಖ್ಯೆ ಹೆಚ್ಚದೇ ಇದ್ದರೆ ಪ್ರಕರಣಗಳ ಬಾಕಿ ಉಳಿಯುವಿಕೆ ಹೆಚ್ಚುತ್ತದೆ. ಇದು ಕಕ್ಷಿದಾರರ ಮೇಲೆ ವಿವಿಧ ಬಗೆಯ ಪರಿಣಾಮ ಬೀರುತ್ತದೆ. ನ್ಯಾಯಾಲಯಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಪ್ರಕರಣಗಳ ಇತ್ಯರ್ಥಕ್ಕೆ ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ” ಎನ್ನುತ್ತಾರೆ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾಹಿತಿ ಹಂಚಿಕೊಂಡ  ಭೀಮನಗೌಡ ಪರಗೊಂಡ.  

ಅಂಕಿ ಅಂಶಗಳನ್ನು ಇಲ್ಲಿ ಗಮನಿಸಿ:

Kannada Bar & Bench
kannada.barandbench.com