
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಭಾರತದ ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಅನಿರ್ದಿಷ್ಟಾವಧಿಯವರೆಗೆ ಅಂಕಿತ ಹಾಕದೆ ಹೋದರೆ ಆಗಲೂ ನ್ಯಾಯಾಂಗ ಸುಮ್ಮನೆ ಇರಬೇಕೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನಃ ಕಳವಳ ವ್ಯಕ್ತಪಡಿಸಿತು.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿದ್ದ ತೀರ್ಪು ಪ್ರಶ್ನಿಸಿ ರಾಷ್ಟ್ರಪತಿಗಳು ಸಲಹೆ ಕೋರಿ ಸುಪ್ರೀಂ ಕೋರ್ಟ್‌ಗೆ ಮಾಡಿದ್ದ ಶಿಫಾರಸ್ಸಿನ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠದೆದರು ನಡೆಯಿತು.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಚ ನ್ಯಾಯಾಲಯದ ಸಲಹೆ ಕೋರಿ ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ಶಿಫಾರಸ್ಸು ಮಾಡಿದ್ದರು.
2020ರಲ್ಲಿ ಅಂಗೀಕಾರವಾದ ಮಸೂದಗೆ 2025ರಲ್ಲಿಯೂ ರಾಜ್ಯಪಾಲರು ಇಲ್ಲವೇ ರಾಷ್ಟ್ರಪತಿಗಳ ಅಂಕಿತ ದೊರೆಯದೆ ಹೋದರೆ ನ್ಯಾಯಾಲಯ ಆಗಲೂ ಸುಮ್ಮನಿರಬೇಕೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದೇ ಬಗೆಯ ಪ್ರಶ್ನೆಯನ್ನು ಈ ಹಿಂದಿನ ವಿಚಾರಣೆ ವೇಳೆಯೂ ಅದು ಕೇಳಿತ್ತು.
ಮಧ್ಯಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಇಂತಹ ಸಂಗತಿಗಳನ್ನು ಸಂಸತ್ತಿಗೆ ಬಿಡುವುದೇ ಉತ್ತಮ ಎಂದರು. ಮುಂದುವರೆದು, ರಾಷ್ಟ್ರಪತಿ ಅಥವಾ ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನುವ ಊಹೆಯ ಮೇಲೆ ಈ ರೀತಿಯ ಚರ್ಚೆಗಳನ್ನು ಆರಂಭಿಸಲಾಗದು ಎಂದರು. ನ್ಯಾಯಾಂಗ ಪರಿಶೀಲನೆಗೆ ಮಿತಿ ಇದ್ದು ಎಲ್ಲಾ ಕ್ರಿಯೆಗಳೂ ನ್ಯಾಯಾಲಯ ಪರಿಶೀಲನೆಗೆ ಒಳಪಡಬೇಕಿಲ್ಲ ಎಂದರು.
ಒಂದು ನಿರ್ದಿಷ್ಟ ಕ್ರಿಯೆಗೆ ನ್ಯಾಯಿಕ ವಿಚಾರಣಾ ಮಾನದಂಡಗಳಿಲ್ಲದಿದ್ದರೆ, ಅದು ನ್ಯಾಯಾಂಗ ಪ್ರಕ್ರಿಯೆಗೆ ಒಳಗಾಗುವುದಿಲ್ಲ. ನ್ಯಾಯಾಂಗ ಪರಿಶೀಲನೆಯ ಅಧಿಕಾರವು ಅಂತರ್ಗತವಲ್ಲ ಎಂದು ಯಾರೂ ಹೇಳುತ್ತಿಲ್ಲ ಆದರೆ ಕೆಲವೊಂದು ನಿರ್ದಿಷ್ಟ ಅಧಿಕಾರಗಳಿದ್ದು ಅವುಗಳಿಗೆ ನ್ಯಾಯಿಕ ವಿಚಾರಣೆಗಳು ಸೇರ್ಪಡೆಯಾಗುವುದಿಲ್ಲ (ನ್ಯಾಯಿಕ ವಿಚಾರಣೆಗಳಿಗೆ ಒಳಪಡುವುದಿಲ್ಲ) ಎಂದು ಅವರು ವಿವರಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಗವಾಯಿ ಅವರು ಮಸೂದೆಯನ್ನು ಮತ್ತೆ ಸಲ್ಲಿಸಿದರೂ ರಾಜ್ಯಪಾಲರು ಒಪ್ಪದಿರಲು ಸಾಧ್ಯವೋ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ರಾಜ್ಯಪಾಲರ ಅಧಿಕಾರವನ್ನು ವಿಟೋ ಅಧಿಕಾರ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಬಾರದು ಎಂದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಕರಣದ ನಿರ್ವಹಣೆ ಕುರಿತಂತೆ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದರು. ಸಂವಿಧಾನದ 131 ಅಥವಾ 132ರ ಅಡಿಯಲ್ಲಿ ವಿಚಾರಣೆ ನಡೆಸುವ ಕುರಿತಂತೆ ಸರ್ಕಾರದಿಂದ ತಾನು ಸೂಚನೆ ಪಡೆಯಬೇಕಿದೆ ಎಂದರು. ಪ್ರಕರಣದ ವಿಚಾರಣೆ ಬುಧವಾರ ಮುಂದುವರೆಯಲಿದೆ.
ರಾಜಸ್ಥಾನ ಸರ್ಕಾರದ ಪರವಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ಮಣೀಂದರ್ ಸಿಂಗ್, ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ಗೋವಾ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್‌ಜಿತ್ ಬ್ಯಾನರ್ಜಿ ವಾದ ಮಂಡಿಸಿದರು. ಛತ್ತೀಸ್‌ಗಢ ಸರ್ಕಾರವನ್ನು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಪ್ರತಿನಿಧಿಸಿದ್ದರು. ಹಿರಿಯ ವಕೀಲರಾದ ವಿನಯ್ ನವ್ರೆ, ಗುರು ಕೃಷ್ಣ ಕುಮಾರ್ ಕೂಡ ತಮ್ಮ ವಾದ ಮಂಡಿಸಿದರು.