ಮಹಿಳಾ ನ್ಯಾಯಾಧೀಶರೆಡೆಗೆ ಲಿಂಗ ಸಂವೇದನೆಯಿಂದ ವರ್ತಿಸಿ ಎಂದ ಸುಪ್ರೀಂ; ಮಧ್ಯಪ್ರದೇಶ ನ್ಯಾಯಾಧೀಶರ ವಜಾ ಆದೇಶ ರದ್ದು

ಮಹಿಳಾ ನ್ಯಾಯಾಧೀಶರು ಕೆಲಸ ಮಾಡಲು ಅಗತ್ಯವಾದ ಉತ್ತಮ ವಾತಾವರಣವನ್ನು ಬಲಪಡಿಸಬೇಕು ಎಂದ ನ್ಯಾಯಪೀಠ.
Woman Judge
Woman Judge
Published on

ಮಧ್ಯಪ್ರದೇಶ ಹೈಕೋರ್ಟ್ ಮತ್ತು ಸರ್ಕಾರದ ಪ್ರತಿಕೂಲ ವರದಿಗಳ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾದ ಇಬ್ಬರು ಮಹಿಳಾ ನ್ಯಾಯಾಧೀಶರನ್ನು ಸೇವೆಯಲ್ಲಿ ಮರುಸ್ಥಾಪಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ [ಸಿವಿಲ್ ನ್ಯಾಯಾಧೀಶರ ವಜಾ, ವರ್ಗ-II (ಜೂನಿಯರ್‌. ವಿಭಾಗ) ಮಧ್ಯಪ್ರದೇಶ ರಾಜ್ಯ ನ್ಯಾಯಾಂಗ ಸೇವೆ].

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ತಮ್ಮ ಆದೇಶದಲ್ಲಿ, ಮೌಲ್ಯಮಾಪನದ ಅವಧಿಯಲ್ಲಿ ಮಹಿಳಾ ನ್ಯಾಯಾಧೀಶರಲ್ಲಿ ಒಬ್ಬರು ವಿವಾಹವಾದರು, ಕೋವಿಡ್-19 ಸೋಂಕಿಗೆ ಒಳಗಾದರು ಮುಂದೆ ಅವರಿಗೆ ಗರ್ಭಪಾತವಾಯಿತು, ಅಲ್ಲದೆ ಅವರ ಸಹೋದರನಿಗೆ ಕ್ಯಾನ್ಸರ್ ಇರುವುದು ಸಹ ಪತ್ತೆಯಾಯಿತು ಎನ್ನುವ ಅಂಶಗಳನ್ನು ಪರಿಗಣಿಸಿತು.

ಮುಂದುವರೆದು, "ಹೈಕೋರ್ಟ್ ವರದಿಯು ನ್ಯಾಯಾಧೀಶರು ನಿರಂತರವಾಗಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ ಎನ್ನುವ ಅಂಶವನ್ನು ತೋರುವುದಿಲ್ಲ. ನ್ಯಾಯಾಲಯದ ವರದಿಯಲ್ಲಿ ಅಂತರ್ಗತ ವಿರೋಧಾಭಾಸಗಳಿವೆ... ವಜಾಗೊಳಿಸುವ ಮೊದಲು ಈ ನ್ಯಾಯಾಧೀಶರಿಗೆ ಅವಕಾಶವನ್ನು ನೀಡಬೇಕೆಂದು ನಾವು ಅಭಿಪ್ರಾಯಪಡುತ್ತೇವೆ. ಹೀಗಾಗಿ, ವಜಾಗೊಳಿಸುವಿಕೆಯು ದಂಡನೀಯವು, ಅನಿಯಂತ್ರಿತವೂ ಹಾಗೂ ಕಾನೂನುಬಾಹಿರವೂ ಆಗಿದೆ," ಎಂದು ತನ್ನ ಆದೇಶದಲ್ಲಿ ದಾಖಲಿಸಿತು.

ಭಾರತದಲ್ಲಿ ಮಹಿಳಾ ನ್ಯಾಯಾಧೀಶರು ಮುಂಚೂಣಿಗೆ ಬರಲು ಪೂರಕ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯತೆಯ ಬಗ್ಗೆಯೂ ನ್ಯಾಯಮೂರ್ತಿ ನಾಗರತ್ನ ಅವರು ಅದೇಶದಲ್ಲಿ ದಾಖಲಿಸಿದ್ದಾರೆ. "ಮಹಿಳೆಯರು ಈ ಕ್ಷೇತ್ರ ಪ್ರವೇಶಿಸುವುದನ್ನು, ನಂತರ ಇಲ್ಲಿ ಉಳಿಯುವುದನ್ನು ಹಾಗೂ ಅವರ ಸಂಖ್ಯೆ ನ್ಯಾಯಾಂಗದ ಹಿರಿಯ ಶ್ರೇಣಿಗಳಲ್ಲಿ ಹೆಚ್ಚುವುದರ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನ್ಯಾಯಾಂಗದಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯವು ನ್ಯಾಯದಾನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ವಿಶಾಲವಾದ ರೀತಿಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ," ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ, "ಗರ್ಭಧರಿಸಿದ್ದ ವೇಳೆ ಮಹಿಳೆಯರಿಗೆ ತಾರತಮ್ಯದಿಂದ ಮುಕ್ತಿ ನೀಡುವುದು ಅಮೂಲ್ಯವಾದ ಹಕ್ಕು. ಪುನರಾವರ್ತಿತ ಗರ್ಭಪಾತಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತವೆ... ಮಹಿಳಾ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎನ್ನುವುದಕ್ಕಷ್ಟೇ ತೃಪ್ತರಾಗದೆ ಅವರು ಕೆಲಸ ಮಾಡಲು ನಾವು ಉತ್ತಮ ವಾತಾವರಣವನ್ನು ನಿರ್ಮಿಸಬೇಕಿದೆ" ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಅಂತಿಮವಾಗಿ ನ್ಯಾಯಾಲಯವು ಇಬ್ಬರು ಮಹಿಳಾ ನ್ಯಾಯಾಧೀಶರನ್ನು ವಜಾಗೊಳಿಸಿದ್ದ ಆದೇಶವನ್ನು ಬದಿಗೆ ಸರಿಸಿ, ಅವರನ್ನು ಸೇವೆಯಲ್ಲಿ ಪುನರ್ಸ್ಥಾಪಿಸಿತು. ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ಅದು ನೀಡಿತು. ನ್ಯಾಯಾಧೀಶರನ್ನು ವಜಾಗೊಳಿಸಲು ನ್ಯಾಯಾಲಯದ ವರದಿಯು ಆಧಾರವಾಗದು ಎಂದು ಸ್ಪಷ್ಟಪಡಿಸಿತು.

Kannada Bar & Bench
kannada.barandbench.com