ಮೈಸೂರಿನ ಗನ್‌ಹೌಸ್‌ ವೃತ್ತದಲ್ಲಿ ಸುತ್ತೂರು ಶ್ರೀ ಪುತ್ಥಳಿ: 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಒಂದು ಧರ್ಮದ ಪುತ್ಥಳಿಗೆ ಅವಕಾಶ ಮಾಡಿದರೆ, ನಾಳೆ ಇನ್ನೊಂದು ಧರ್ಮದವರು ಕೇಳಬಹುದು. ಇದು ಇದೇ ರೀತಿ ಮುಂದುವರಿಯುತ್ತದೆ. ಸುಪ್ರೀಂ ಕೋರ್ಟ್‌ ಕನಿಷ್ಠ ಏಳು ತೀರ್ಪುಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಬಾರದು ಎಂದಿದೆ ಎಂದ ಪೀಠ.
Sri Shivaratri Rajendra Swamiji and Karnataka HC
Sri Shivaratri Rajendra Swamiji and Karnataka HC

ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಪುತ್ಥಳಿಯನ್ನು ಅನಧಿಕೃತವಾಗಿ ಸ್ಥಾಪಿಸಿದ್ದು, ಅದನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ‌ ಮಾಡಿದೆ.

ಮೈಸೂರಿನ ಗಿರಿಯಾಭೋವಿ ಪಾಳ್ಯ ನಿವಾಸಿ ಸುಬ್ರಹ್ಮಣ್ಯ ಮತ್ತು ಕುರುಬರಹಳ್ಳಿ ನಿವಾಸಿ ಎನ್.ಶೀಲಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಾದ- ಪ್ರತಿವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಪೊಲೀಸ್‌ ಆಯುಕ್ತರು ಮತ್ತು ಮೈಸೂರು ವಿಭಾಗದ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

“ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಅಗತ್ಯ ಸೂಚನೆ ಪಡೆದು, ಸೂಕ್ತ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಸಮಯ ಕೋರಿದ್ದು, ಎರಡು ವಾರ ನೀಡಲಾಗಿದೆ. ಅರ್ಜಿದಾರರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಜನವರಿ 4ರಂದು ಅನಾವರಣ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜಿಸಿರುವ ಆಹ್ವಾನ ಪತ್ರಿಕೆ ನೀಡುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ. ಆದರೆ, ಅದನ್ನು ನೀಡಿಲ್ಲವಾದ್ದರಿಂದ ಮಧ್ಯಂತರ ಆದೇಶ ಮಾಡುವ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಇದಕ್ಕೂ ಮುನ್ನ, ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸರ್ಕಾರದ ಸ್ಥಳಗಳಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಪುತ್ಥಳಿಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೆ, ವೃತ್ತಗಳಲ್ಲಿ ಪುತ್ಥಳಿ ಸ್ಥಾಪಿಸಬಾರದು ಎಂದು ಹೇಳಿಲ್ಲ. ಸಂಚಾರಕ್ಕೆ ಅಡಚಣೆಯಾಗದಂತೆ ವೃತ್ತಗಳಲ್ಲಿ ಪುತ್ಥಳಿ ಸ್ಥಾಪಿಸಬಹುದಾಗಿದೆ. ಈ ಪ್ರಕರಣದಲ್ಲಿ ಸಕ್ರಮವಾಗಿಯೇ ಪುತ್ಥಳಿ ಸ್ಥಾಪಿಸಲಾಗಿದೆ. ಹೈಕೋರ್ಟ್ ಅನುಮತಿ ನೀಡಿದ ನಂತರವೇ ಪುತ್ಥಳಿ ಸ್ಥಾಪನೆ ಮಾಡಲಾಗಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸಬಾರದು” ಎಂದು ಕೋರಿದರು.

ಆಗ ಪೀಠವು, “ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿ ಪುತ್ಥಳಿ ಅಥವಾ ಪ್ರತಿಮೆಗಳನ್ನು ಸ್ಥಾಪನೆ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ತೀರ್ಪು ನೀಡಿದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಸರ್ಕಾರಿ ಸ್ಥಳಗಳಲ್ಲಿ ಅನಧಿಕೃತ ಪ್ರತಿಮೆಗಳನ್ನು ಸ್ಥಾಪಿಸಿದ್ದರೆ, ಅವುಗಳನ್ನು ತೆರವುಗೊಳಿಸಬೇಕು. ಹಾಗೆಯೇ, ರಸ್ತೆ ಮಾರ್ಗಗಳಲ್ಲಿ ಅನಧಿಕೃತವಾಗಿ ಪುತ್ಥಳಿ ನಿರ್ಮಾಣ ಮಾಡುತ್ತಿರುವುದನ್ನು ಮೊದಲೇ ಗಮನ ಹರಿಸಿ ತಡೆಯಬೇಕು. ಒಮ್ಮೆ ಪುತ್ಥಳಿ ನಿರ್ಮಾಣವಾದಲ್ಲಿ, ಅದನ್ನು ತೆರವುಗೊಳಿಸುವುದ ಕಷ್ಟ” ಎಂದು ಮೌಖಿಕವಾಗಿ ಹೇಳಿತು.

ನ್ಯಾ. ದೀಕ್ಷಿತ್‌ ಅವರು “ಇತ್ತೀಚೆಗೆ ನಮ್ಮ ಅವಲೋಕನಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಹೀಗಾಗಿ, ತಪ್ಪಾಗಿ ತಿಳಿಯಬೇಡಿ. ನಮಗೆ ಖ್ಯಾತ ಸಂತರು, ಅವರ ಪುತ್ಥಳಿಗಳ ಬಗ್ಗೆ ಅಪಾರ ಗೌರವವಿದೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಹೀಗಿರುವಾಗ ಪುತ್ಥಳಿ ನಿರ್ಮಾಣಕ್ಕೆ ಹೇಗೆ ಅನುಮತಿಸಬಹುದು? ಪ್ರತಿಯೊಂದು ವೃತ್ತದಲ್ಲಿ ಪುತ್ಥಳಿ ನೋಡಬೇಕೆ? ಒಂದು ಧರ್ಮದ ಪುತ್ಥಳಿಗೆ ಅವಕಾಶ ಮಾಡಿದರೆ, ನಾಳೆ ಇನ್ನೊಂದು ಧರ್ಮದವರು ಕೇಳಬಹುದು. ಇದು ಇದೇ ರೀತಿ ಆಗುತ್ತದೆ. ಸುಪ್ರೀಂ ಕೋರ್ಟ್‌ ಕನಿಷ್ಠ ಏಳು ತೀರ್ಪುಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಬಾರದು ಹೇಳಿರುವಾಗ ವೃತ್ತಗಳಲ್ಲಿ ಪುತ್ಥಳಿ ಏಕೆ? ಸುಪ್ರೀಂ ಕೋರ್ಟ್‌ ತೀರ್ಪಿನ ಅಂತರಾಳವನ್ನು ಅರಿಯಬೇಕು. ನಾವು ಶಾಸನದ ವಿರುದ್ಧವಲ್ಲ. ಬದಲಿಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸುವ ಪುತ್ಥಳಿಗಳಿಗೆ ವಿರುದ್ಧ. ಶಾಸನಗಳನ್ನು ಅಡ್ವೊಕೇಟ್‌ ಜನರಲ್‌ ಸಮರ್ಥಿಸಬಹುದು. ಈಗ ಪ್ರತಿಯೊಂದು ಶಾಸನವೂ ಸಾಂವಿಧಾನಿಕ ಎಂಬ ಭಾವನೆ ಇದೆ” ಎಂದರು.

Also Read
ಮೈಸೂರಿನಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀ ಪುತ್ಥಳಿ ನಿರ್ಮಾಣ: ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಆಗ ಸಿಜೆ ಅವರು “ನಗರಗಳನ್ನು ರಕ್ಷಿಸಬೇಕು ಎಂಬುದು ಸುಪ್ರೀಂ ಕೋರ್ಟ್‌ ಉದ್ದೇಶ. ಪ್ರತಿಯೊಂದು ವೃತ್ತ, ಮೂಲೆಯಲ್ಲಿ ಪುತ್ಥಳಿ ನಿರ್ಮಿಸಿದರೆ ಹೇಗೆ? ದೂರದ ಪ್ರದೇಶದಲ್ಲೋ ಅಥವಾ ಉದ್ಯಾನದ ಮಧ್ಯಭಾಗದಲ್ಲಿಯೋ ಯಾರಿಗೂ ತೊಂದರೆಯಾಗದಂತೆ ಅಗತ್ಯ ಅನುಮತಿಗಳೊಂದಿಗೆ ಪ್ರತಿಮೆ ಸ್ಥಾಪನೆ ಮಾಡುವುದರಿಂದ ಯಾವ ಸಮಸ್ಯೆ ಉದ್ಭವಿಸುವುದಿಲ್ಲ” ಎಂದು ಮೌಖಿಕವಾಗಿ ಹೇಳಿದರು.

ಮೈಸೂರಿನ ಗನ್‌ ಹೌಸ್‌ ಸರ್ಕಲ್‌ನಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಇತ್ತೀಚೆಗೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಪ್ರತಿಭಟನೆ ನಡೆದಿವೆ. ಸ್ವಾಮೀಜಿ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪುತ್ಥಳಿ ಅಥವಾ ಪ್ರತಿಮೆ ಸ್ಥಾಪಿಸಬಾರದು ಎಂದು ನ್ಯಾಯಾಲಯಗಳು ಆದೇಶ ಮಾಡಿವೆ. ಆದ್ದರಿಂದ ಸ್ವಾಮೀಜಿಯ ಪುತ್ಥಳಿಯನ್ನು ತೆರವುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com