ಮೈಸೂರಿನಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀ ಪುತ್ಥಳಿ ನಿರ್ಮಾಣ: ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಶ್ರೀಕಂಠದತ್ತ ಒಡೆಯರ್‌ ಪುತ್ಥಳಿ ಪ್ರತಿಷ್ಠಾಪಿಸಲು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿರಲಿಲ್ಲ. ಈಗ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಅನುಮತಿಸಲಾಗಿದೆ ಎಂದು ಅರ್ಜಿದಾರರು ತಕಾರರು ಎತ್ತಿದ್ದರು.
Sri Shivaratri Rajendra Swamiji and Karnataka HC
Sri Shivaratri Rajendra Swamiji and Karnataka HC

ಮೈಸೂರು ನಗರದ ಗನ್‌ ಹೌಸ್‌ ವೃತ್ತದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ 2017ರಲ್ಲಿ ಅನುಮತಿ ಪಡೆಯಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಹೇಳಿದ್ದು, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ನ್ಯಾಯಾಲಯವು ಬದಿಗೆ ಸರಿಸಿದೆ.

ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿ ಶ್ರೀಕಂಠದತ್ತ ಒಡೆಯರ್‌ ಪುತ್ಥಳಿ ಪ್ರತಿಷ್ಠಾಪಿಸಲು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿರಲಿಲ್ಲ. ಈಗ ಶ್ರೀ ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಅನುಮತಿಸಲಾಗಿದೆ ಎಂದು ಅರ್ಜಿದಾರರು ತಕಾರರು ಎತ್ತಿದ್ದರು.

“ಸ್ವಾಮೀಜಿ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ವೃತ್ತವು ಮೈಸೂರು ನಗರದಲ್ಲೇ ಅತ್ಯಂತ ಜನನಿಬಿಡ ವೃತ್ತ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ನಕ್ಷೆ ಮತ್ತಿತರ ದಾಖಲೆಗಳಿಂದ ತಿಳಿದುಬರುವುದೇನೆಂದರೆ ಸದರಿ ವೃತ್ತಕ್ಕೆ ಆರು ರಸ್ತೆಗಳು ಕೂಡುತ್ತವೆ. ವೃತ್ತವು ರಸ್ತೆಯ ಭಾಗವಾಗಿದೆ” ಎಂದು ಪೀಠ ಹೇಳಿದೆ.

Also Read
ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ: ತಪ್ಪಿತಸ್ಥರ ವಿರುದ್ಧ ತಿಂಗಳಲ್ಲಿ ಕ್ರಮಕ್ಕೆ ಸರ್ಕಾರಕ್ಕೆ ಹೈಕೋರ್ಟ್‌ ಗಡುವು

ಸಾರ್ವಜನಿಕ ರಸ್ತೆಯಲ್ಲಿ ಪುತ್ಥಳಿ ಅಥವಾ ಕಟ್ಟಡ ನಿರ್ಮಿಸಲು ಯಾವುದೇ ತೆರನಾದ ಅನುಮತಿ ನೀಡಬಾರದು ಎಂದು ಸ್ಪಷ್ಟವಾಗಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ. ಹೀಗಿರುವಾಗ ಪುತ್ಥಳಿ ನಿರ್ಮಿಸಲು ಅನುಮತಿಸುವುದು ಅಥವಾ ಮೈಸೂರು ಮಹಾನಗರ ಪಾಲಿಕೆಯು ಪುತ್ಥಳಿ ನಿರ್ಮಿಸುವ ಸಂಬಂಧ ಗೊತ್ತುವಳಿ ಮಂಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ವೃತ್ತ ಅಥವಾ ದ್ವೀಪ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಯಾರೂ ಪುತ್ಥಳಿ ನಿರ್ಮಿಸಲಾಗದು ಎಂಬುದು ನ್ಯಾಯಾಲಯದ ಖಚಿತ ಅಭಿಪ್ರಾಯವಾಗಿದೆ” ಎಂದು ಪೀಠ ಹೇಳಿದೆ.

ಇಡೀ ರಾಜ್ಯದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲಾಗುತ್ತದೆ ಎಂಬುದನ್ನು ಖಾತರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ. ಸಾರ್ವಜನಿಕ ರಸ್ತೆಗಳು, ಕಾಲು ಹಾದಿ, ರಸ್ತೆ ಬದಿ ಮತ್ತು ಸಾರ್ವಜನಿಕರು ಬಳಸುವ ಇತರ ಸ್ಥಳಗಳಲ್ಲಿ ಪುತ್ಥಳಿ ನಿರ್ಮಿಸಲು ಅಥವಾ ಯಾವುದೇ ಕಟ್ಟಡ ನಿರ್ಮಿಸಲು ಅನುಮತಿಸದಂತೆ 2013ರಲ್ಲಿ ಸುಪ್ರೀಂ ಕೋರ್ಟ್‌ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com