ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆ: ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧದ ಆರೋಪ ಪಟ್ಟಿ ವಜಾ

ಪುತ್ತೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿಗಳನ್ನು ಮಾನ್ಯ ಮಾಡಿದ ನ್ಯಾ. ಹೇಮಂತ ಚಂದನಗೌಡರ್‌ ನೇತೃತ್ವದ ಏಕಸದಸ್ಯ ಪೀಠ.
Kalladka Prabhakar Bhat, Raghaveshwara Bharathi Swamiji and Karnataka HC
Kalladka Prabhakar Bhat, Raghaveshwara Bharathi Swamiji and Karnataka HC

ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ‌ ಸಂತ್ರಸ್ತೆಯ ಪತಿಯ ಸಹೋದರ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆಗೀಡಾಗಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ರಾಮಕಥಾ ಗಾಯಕಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ರಾಘವೇಶ್ವರ ಸ್ವಾಮೀಜಿ ಪರ ವಹಿಸುವಂತೆ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಮೇಲೆ ಒತ್ತಡ ಹೇರಲಾಗಿತ್ತು ಎನ್ನುವ ಆರೋಪ ಈ ಇಬ್ಬರ ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಸಿಐಡಿ ಈ ಇಬ್ಬರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.

ಪುತ್ತೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಈ ಆರೋಪ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಕೋರಿ ರಾಘವೇಶ್ವರ ಸ್ವಾಮೀಜಿ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ರಾಘವೇಶ್ವರ ಸ್ವಾಮೀಜಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಪಿ ಎನ್‌ ಮನಮೋಹನ್‌ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಶಾಮ್‌ ಪ್ರಸಾದ್‌ ಶಾಸ್ತ್ರಿ ಹತಾಶರಾಗಿ ಆತ್ಮಹತ್ಯೆಗೆ ಶರಣಾದಂತಿದೆ. ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರುಗಳ ಉಲ್ಲೇಖವೇ ಇಲ್ಲ. ಅಂತೆಯೇ, ತನಿಖಾಧಿಕಾರಿಗಳು ಶಾಮ್‌ ಪ್ರಸಾದ್ ಶಾಸ್ತ್ರಿ ಮೃತಪಟ್ಟ ಒಂದು ತಿಂಗಳ ನಂತರ ಸುಳ್ಳು ಹೇಳಿಕೆ ತಯಾರಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದರು.

Also Read
ರಾಘವೇಶ್ವರ ಭಾರತೀ ಶ್ರೀ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಸುಧೀಂದ್ರ ರಾವ್‌

ಪ್ರಕರಣದ ಹಿನ್ನೆಲೆ: ರಾಮಕಥಾ ಗಾಯಕಿಯ ಪತಿ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ್‌ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1 ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು.

Also Read
[ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ] ತೀರ್ಪು ಮರುಪರಿಶೀಲನೆ ಕೋರಿದ್ದ ರಾಮಕಥಾ ಗಾಯಕಿ, ಸಿಐಡಿ ಮನವಿಗಳು ವಜಾ

ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು. ನೀವು ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್‌ ಮತ್ತಿತರರು ಇದ್ದರು ಎಂದು ಆರೋಪಿಸಿ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಈಗ ಇದನ್ನು ರದ್ದುಪಡಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com