ಜೀನ್ಸ್ ಧರಿಸಿ ವಿಚಾರಣೆಗೆ ಹಾಜರಾದ ನ್ಯಾಯವಾದಿಯನ್ನು ಪೊಲೀಸರನ್ನು ಕರೆಸಿ ಹೊರಗೆ ಕಳುಹಿಸಿದ ನ್ಯಾಯಮೂರ್ತಿ
ಜೀನ್ಸ್ ಧರಿಸಿ ವಿಚಾರಣೆಗೆ ಹಾಜರಾದ ವಕೀಲರೊಬ್ಬರನ್ನು ಪೊಲೀಸರಿಗೆ ಹೇಳಿ ನ್ಯಾಯಾಲಯದ ಆವರಣದಿಂದ ಹೊರಗೆ ಕಳುಹಿಸಿದ ಘಟನೆ ಗುವಾಹಟಿ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆದಿದೆ.
ಈ ಅನಿರೀಕ್ಷಿತ ಘಟನೆಯನ್ನು ತಮ್ಮ ಆದೇಶದಲ್ಲಿ ದಾಖಲಿಸಿದ ನ್ಯಾ. ಕಲ್ಯಾಣ್ ರಾಯ್ ಸುರಾನಾ ಅವರು ಇದನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ವಕೀಲರ ಪರಿಷತ್ತುಗಳ ಗಮನಕ್ಕೆ ತರುವಂತೆ ಸೂಚಿಸಿತು.
"ಅರ್ಜಿದಾರರ ಪರ ವಕೀಲರಾದ ಬಿ.ಕೆ. ಮಹಾಜನ್ ಅವರು ಜೀನ್ಸ್ ಪ್ಯಾಂಟ್ ಧರಿಸಿರುವ ಕಾರಣ ಪ್ರಕರಣವನ್ನು ಇಂದು ಮುಂದೂಡಲಾಗಿದೆ. ಅವರನ್ನು ಹೈಕೋರ್ಟ್ ಕ್ಯಾಂಪಸ್‌ನಿಂದ ಹೊರಗೆ ಕಳುಹಿಸಲು ಪೊಲೀಸ್ ಸಿಬ್ಬಂದಿಯನ್ನು ಕರೆಸಬೇಕಾಯಿತು" ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.
ಬಿಜನ್ ಕುಮಾರ್ ಮಹಾಜನ್ ಎಂಬ ವಕೀಲರು ನಿರೀಕ್ಷಣಾ ಜಾಮೀನು ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಹಾಜರಾಗಿದ್ದರು. ವಕೀಲರ ಕಾಯಿದೆ 1961 ರ ಪ್ರಕಾರ ವಿಚಾರಣೆಗೆ ಹಾಜರಾಗುವಾಗ ವಕೀಲರು ಕಪ್ಪು ಕೋಟು ಅಥವಾ ಕಪ್ಪನೆಯ ಉದ್ದನೆಯ ನಿಲುವಂಗಿ (ರೋಬ್), ಬಿಳಿಯ ಅಂಗಿ ಮತ್ತು ಕುತ್ತಿಗೆಪಟ್ಟಿ (ನೆಕ್‌ಬ್ಯಾಂಡ್) ಇರುವ ನಿರ್ದಿಷ್ಟ ಸಮವಸ್ತ್ರ ಧರಿಸಿರಬೇಕು. ಭಾರತೀಯ ವಕೀಲರ ಪರಿಷತ್ತಿನ ವೃತ್ತಿಪರ ಮಾನದಂಡ ಕೂಡ ಇದನ್ನೇ ಹೇಳುತ್ತದೆ.