ವಿಭಾಗೀಯ ಪೀಠದ ಸೂಚನೆಗಳಿಗೆ ವಿರುದ್ಧದ ನಿರ್ದೇಶನಗಳನ್ನು ಏಕಸದಸ್ಯ ಪೀಠ ರವಾನಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕಿರಣ್ ಕುಮಾರ್ ಚಾವಾ ಮತ್ತು ಉಷಾ ಕಿರಣ್ ನಡುವಣ ಪ್ರಕರಣ].
ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ವಿಭಾಗೀಯ ಪೀಠದ ಆದೇಶಕ್ಕೆ ವಿರುದ್ಧವಾಗಿ ನೀಡಲಾಗಿರುವ ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ಅವರಿದ್ದ ಏಕಸದಸ್ಯ ಪೀಠದ ಆದೇಶದ ಒಂದು ಭಾಗವನ್ನು "ನಿರ್ಲಕ್ಷಿಸಲಾಗುವುದು". ಏಕೆಂದರೆ ಅಂತಹ ಅಂತಹ ಅವಲೋಕನಗಳು ಏಕ ಸದಸ್ಯ ಪೀಠಕ್ಕೆ ನೀಡಲಾದ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠ ಆದೇಶಿಸಿದೆ.
ಫೆಬ್ರವರಿ 1ರಂದು ನೀಡಲಾದ ಆದೇಶದಲ್ಲಿ,” ಭಾರತದಲ್ಲಿ ತಾತ್ಕಾಲಿಕವಾಗಿ ವಾಸಿಸುವ ವ್ಯಕ್ತಿಗಳು ಕೂಡ 2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ಭಾರತೀಯ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಲು ಅರ್ಹರು” ಎಂದು ಏಕಸದಸ್ಯ ಪೀಠ ಹೇಳಿತ್ತು.
ಚೆನ್ನೈನ ಮಹಿಳಾ ನ್ಯಾಯಾಲಯದಲ್ಲಿ ಕಾಯಿದೆಯಡಿ ತಮ್ಮ ವಿಚ್ಛೇದಿತ ಪತ್ನಿ ಹೂಡಿದ್ದ ಮೊಕದ್ದಮೆ ರದ್ದುಗೊಳಿಸಬೇಕೆಂದು ಕೋರಿ ಅಮೆರಿಕದ ಪ್ರಜೆಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸಿತ್ತು.
ಪತ್ನಿ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಒಸಿಐ) ಹೊಂದಿದವರಾಗಿದ್ದು ತಮ್ಮ ಅವಳಿ ಗಂಡುಮಕ್ಕಳು ಕಳೆದ ವರ್ಷ ಭಾರತದ ಚೆನ್ನೈಗೆ ಬಂದು ಹಿಂತಿರುಗದೆ ಅಲ್ಲಿಯೇ ಉಳಿದುಕೊಂಡಿದ್ದರು .ಈ ಅವಧಿಯಲ್ಲಿ ಅಮೆರಿಕದ ನ್ಯಾಯಾಲಯವೊಂದು ಏಕಪಕ್ಷೀಯ ವಿಚ್ಛೇದನ ತೀರ್ಪು ನೀಡಿತ್ತು. ಆ ಪ್ರಕಾರ ಅವಳಿ ಗಂಡುಮಕ್ಕಳ ಪಾಲನೆಯ ಹೊಣೆಯನ್ನು ತಂದೆಗೆ ನೀಡಿದೆ. ಹೀಗಾಗಿ ಭಾರತದಲ್ಲಿ ತನ್ನ ಮಾಜಿಪತ್ನಿ ಹೂಡಿರುವ ಯಾವ ಮೊಕದ್ದಮೆಗಳೂ ಊರ್ಜಿತವಾಗುವುದಿಲ್ಲ ಎಂದು ಪತಿ ವಾದಿಸಿದ್ದರು.
ಅಲ್ಲದೆ ಈ ಸಂಬಂಧ ತಾನು ಕಳೆದ ವರ್ಷ ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನೂ ಸಲ್ಲಿಸಿದ್ದು ಮಕ್ಕಳು ತಂದೆಯೊಂದಿಗೆ ಅಮೆರಿಕಕ್ಕೆ ಮರಳಿ ಅವರ ಬಳಿಯೇ ಉಳಿಯಬೇಕೆಂದು ವಿಭಾಗೀಯ ಪೀಠ ಆದೇಶಿಸಿತ್ತು. ಹೀಗೆ ಆದೇಶ ಇರುವಾಗ ಏಕಸದಸ್ಯ ಪೀಠ ತಮ್ಮ ಮಕ್ಕಳನ್ನು ಮತ್ತೆ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ವಾದಿಸಿದ್ದರು.
ಆದರೆ ಹಿಂದೂ ವಿವಾಹ ಕಾಯಿದೆ ಮತ್ತು ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿಯಲ್ಲಿನ ಪ್ರಕ್ರಿಯೆಗಳೊಂದಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯ ಸ್ವರೂಪ ಮತ್ತು ವ್ಯಾಪ್ತಿಯನ್ನು ಹೋಲಿಸಲಾಗದು. ಹೀಗಾಗಿ ವಿಶೇಷ ಕಾಯಿದೆ ಅಡಿಯಲ್ಲಿ ನೊಂದ ಮಹಿಳೆ ಬಯಸಿರುವ ಪರಿಹಾರದ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ಆ ರೀತಿ ಮಾಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಏಕಸದಸ್ಯ ಪೀಠ ಹೇಳಿತ್ತು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳನ್ನು ಬಲವಂತವಾಗಿ ಅಮೆರಿಕಕ್ಕೆ ಕಳಿಸಲು ತನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದೂ ಅದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಾರ್ಚ್ 2ರಂದು ವಿಚಾರಣೆ ನಡೆಸಿದ ವಿಭಾಗೀಯ ಪೀಠ “ಏಕಸದಸ್ಯ ಪೀಠ ತನ್ನ ಆದೇಶ ಜಾರಿ ಮಾಡುವ ಮೂಲಕ ಅಧಿಕಾರ ವ್ಯಾಪ್ತಿ ಮೀರಿದ್ದಾರೆ ಎಂದಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]