ಕುಖ್ಯಾತ ಸಿಸ್ಟರ್ ಅಭಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಗುರುವಾರ ಪುರಸ್ಕರಿಸಿದೆ [ಥಾಮಸ್ ಕೊಟ್ಟೂರ್ ಮತ್ತು ಸಿಬಿಐ ನಡುವಣ ಪ್ರಕರಣ].
₹ 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಶೂರಿಟಿ ಒದಗಿಸುವಂತೆ ಸೂಚಿಸಿ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಿತು.
"ಪ್ರತಿವಾದಿ ವಕೀಲರು ಸೂಚಿಸಿರುವಂತೆ ಸಾಕ್ಷ್ಯವನ್ನು ಮೇಲ್ನೋಟಕ್ಕೆ ಗಮನಿಸಿದರೆ ಮತ್ತು ಪ್ರಾಸಿಕ್ಯೂಷನ್ ಅದನ್ನು ಪರಿಣಾಮಕಾರಿಯಾಗಿ ಎದುರಿಸದೇ ಇರುವುದರಿಂದ ಮೇಲ್ಮನವಿ ಇತ್ಯರ್ಥವಾಗುವವರೆಗೆ ಇಬ್ಬರು ಆರೋಪಿಗಳ ಶಿಕ್ಷೆಯನ್ನು ಅಮಾನತುಗೊಳಿಸಿ ಅವರನ್ನು ಬಿಡುಗಡೆ ಮಾಡದೆ ಇರಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.
1992ರ ಮಾರ್ಚ್ 27ರಂದು ಅಭಯಾ ಅವರ ಶವ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. 1993ರಲ್ಲಿ ಇದೊಂದು ಆತ್ಮಹತ್ಯೆ ಎಂದು ತೀರ್ಮಾನಿಸಿದ್ದ ಕೇರಳ ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದರು. ಜೋಮನ್ ಪುಥೆನ್‌ಪುರಕ್ಕಳ್ ಎಂಬ ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವಹಿಸಿತ್ತು.
ಆದರೂ 1996ರಲ್ಲಿ ಸಿಬಿಐ ಇದು ಆತ್ಮಹತ್ಯೆಯೋ, ಹತ್ಯೆಯೋ ಎಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಸಲ್ಲಿಸಿತು. ಆದರೆ ವರದಿಯನ್ನು ಒಪ್ಪದ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿತ್ತು. ಒಂದು ವರ್ಷದ ಬಳಿಕ ಇದೊಂದು ಹತ್ಯೆ ಎಂದು ತೀರ್ಮಾನಕ್ಕೆ ಸಿಬಿಐ ಬಂದಿತಾದರೂ ಯಾವುದೇ ಪುರಾವೆಗಳಿಲ್ಲದೆ ಪ್ರಕರಣ ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು. ಆದರೆ ನ್ಯಾಯಾಲಯ ಮತ್ತೆ ಈ ವರದಿಯನ್ನೂ ತಿರಸ್ಕರಿಸಿತು. ಸಿಬಿಐ ಮೂರನೇ ಸುತ್ತಿನ ತನಿಖೆ ಆರಂಭಿಸಿತು. ಹತ್ತು ವರ್ಷಗಳ ಬಳಿಕ (ಕೊಲೆಯಾಗಿ ಹದಿನಾರು ವರ್ಷಗಳ ಬಳಿಕ) 2008ರಲ್ಲಿ ಮೊದಲ ಬಾರಿಗೆ ಫಾದರ್ ಥಾಮಸ್ ಕೊಟ್ಟೂರ್, ಫಾದರ್ ಜೋಸ್ ಪೂತ್ರುಕಾಯಿಲ್ ಹಾಗೂ ಸಿಸ್ಟರ್ ಸೆಫಿ ಅವರನ್ನು ಬಂಧಿಸಲಾಯಿತು. ಕೇರಳ ಹೈಕೋರ್ಟ್ 2009ರಲ್ಲಿ ಆರೋಪಿಗಳಿಗೆ ಜಾಮೀನು ನೀಡಿತ್ತು.
ಡಿಸೆಂಬರ್ 2020ರಲ್ಲಿ ಇಬ್ಬರೂ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಫಾದರ್ ಕೊಟ್ಟೂರ್ ಸಲ್ಲಿಸಿದ ಮನವಿಯನ್ನು ಜನವರಿ 2021ರಲ್ಲಿ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ವಿಚಾರಣೆಗೆ ಅಂಗೀಕರಿಸಿತ್ತು. “ವಿಚಾರಣಾ ನ್ಯಾಯಾಲಯದ ತೀರ್ಪು ಗಂಭೀರ ತಪ್ಪುಗಳಿಂದ ಕೂಡಿದೆ. ಪ್ರಮುಖ ಸಾಕ್ಷಿಯಾದ,ವಿಶ್ವಾಸನೀಯವಲ್ಲದ ಅಡಕ್ಕ ರಾಜು ಹೇಳಿಕೆ, ಸನ್ನಿವೇಶಗಳು ಒಂದಕ್ಕೊಂದು ಸಂಬಂಧವಿಲ್ಲದ ಕತೆಗಳನ್ನೇ ಆಧರಿಸಿವೆ” ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿತ್ತು.