Prajwal Revanna
Prajwal RevannaFacebook

ಪ್ರಜ್ವಲ್‌ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ 1,632 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಎಸ್‌ಐಟಿ

ಹೊಳೆನರಸೀಪುರದ ಗನ್ನಿಗಡ ತೋಟದ ಮನೆಯಲ್ಲಿ ಮತ್ತು ಬಸವನಗುಡಿ ರಾಣೋಜಿ ರಾವ್‌ ರಸ್ತೆಯ ರೇವಣ್ಣ ಮನೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿರುವ ಸಂತ್ರಸ್ತೆ.  
Published on

ಮನೆಗೆಲಸದಾಕೆ ಮೇಲೆ ಎಸಗಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು ಈಚೆಗೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ 1,632 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 113 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಪ್ರಜ್ವಲ್ ವಿರುದ್ಧಧ ಎರಡನೇ ಅತ್ಯಾಚಾರ ಪ್ರಕರಣ ಇದಾಗಿದೆ.

ಎಸ್‌ಐಟಿ ತನಿಖಾಧಿಕಾರಿಯಾಗಿರುವ ಎನ್‌ ಶೋಭಾ ಅವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರಿಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಇನ್ನಷ್ಟೇ ಸಂಜ್ಞೇ ಪರಿಗಣಿಸಬೇಕಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗ್ರಾಮಾಂತರ ಠಾಣೆಯ ವ್ಯಾಪ್ತಿಗೆ ಒಳಪಡುವ ಮೂಳೇಕಾಳೇನಹಳ್ಳಿಯಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಹೆಸರಿನಲ್ಲಿರುವ ಗನ್ನಿಗಡ ತೋಟದ ಮನೆಯಲ್ಲಿ ಕುಡಿಯುವ ನೀರು ಪಡೆಯುವ ನೆಪದಲ್ಲಿ ಎರಡು ಬಾರಿ ಮತ್ತು ಬೆಂಗಳೂರಿನ ಬಸವನಗುಡಿಯ ರಾಣೋಜಿ ರಾವ್‌ ರಸ್ತೆಯಲ್ಲಿ ಶಾಸಕ ಎಚ್‌ ಡಿ ರೇವಣ್ಣ ಹೆಸರಿನಲ್ಲಿರುವ ಮನೆಯಲ್ಲಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋಗುವ ನೆಪದಲ್ಲಿ ಕರೆದು ಒಂದು ಬಾರಿ ಪ್ರಜ್ವಲ್‌ ಅತ್ಯಾಚಾರ ಎಸಗಿದ್ದಾರೆ. ಪರಿಪರಿಯಾಗಿ ಬೇಡಿದರೂ ಪ್ರಜ್ವಲ್‌ ತನ್ನನ್ನು ಬಿಟ್ಟಿಲ್ಲ ಎಂದು ಕೆ ಆರ್‌ ನಗರ ತಾಲ್ಲೂಕಿನ ಗ್ರಾಮವೊಂದರ 48 ವರ್ಷದ ಮಹಿಳೆ ನೀಡಿದ ದೂರನ್ನು ಆಧರಿಸಿದ ಪ್ರಕರಣದ ತನಿಖೆ ನಡೆಸಿ ಎಸ್‌ಐಟಿ ಅಧಿಕಾರಿಯು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸಂತ್ರಸ್ತೆ ಹೇಳಿಕೆ, ಸಾಂದರ್ಭಿಕ ಸಾಕ್ಷಿ ಮತ್ತು ಸಂತ್ರಸ್ತೆಯ ಅಶ್ಲೀಲ ವಿಡಿಯೋ ಕ್ಲಿಪ್‌, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಆರೋಪಿ ಅಪರಾಧ ಎಸಗಿರುವುದು ದೃಢಪಟ್ಟಿದೆ. ಸಂತ್ರಸ್ತೆಯ ಮೇಲಿನ ಬಲವಂತದ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡಿದ್ದ ಮೊಬೈಲ್‌ ಫೋನ್‌ ನಾಶಪಡಿಸುವ ಮೂಲಕ ಪ್ರಜ್ವಲ್‌ ಅಪರಾಧ ಎಸಗಿದ್ದಾರೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

Also Read
ಅತ್ಯಾಚಾರ ಪ್ರಕರಣ: ರೇವಣ್ಣ ವಿರುದ್ಧ ಒಂದು, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮೂರು ಆರೋಪ ಪಟ್ಟಿ ಸಲ್ಲಿಕೆ

ಸಂತ್ರಸ್ತೆಯ ಹೇಳಿಕೆ ಆಧರಿಸಿ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ 376(2)(n), 376(2)(k), 506, 354(A), 354(B), 354(c), 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66E ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ನಾಳೆ ವಿಚಾರಣೆಗೆ ಬರಲಿದೆ.

ಹೊಳೆನರಸೀಪುರದ ಟೌನ್‌ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಜ್ವಲ್‌ ವಿರುದ್ಧ ಎಸ್‌ಐಟಿಯು  2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದಾರೆ.

Kannada Bar & Bench
kannada.barandbench.com