ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಎದುರಿಸಲು ಹೊಂಜು (ಹೊಗೆ ಮತ್ತು ಮಂಜು) ನಿಯಂತ್ರಣ ಗೋಪುರಗಳ ಬಳಕೆ ಪ್ರಾಯೋಗಿಕ ಪರಿಹಾರವಲ್ಲ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಮಾಹಿತಿ ನೀಡಿದೆ.
ಬಾಂಬೆ ಮತ್ತು ದೆಹಲಿಯ ಐಐಟಿ ವರದಿಗಳನ್ನು ಉಲ್ಲೇಖಿಸಿರುವ ಡಿಪಿಸಿಸಿ 100-ಮೀಟರ್ ವ್ಯಾಪ್ತಿಯಲ್ಲಿ, ಹೊಂಜು ಗೋಪುರ ಕೇವಲ ಶೇ 17ರಷ್ಟು ಮಾಲಿನ್ಯ ಕಡಿಮೆ ಮಾಡುತ್ತದೆ ಎಂದಿದೆ.
ದೆಹಲಿಯಾದ್ಯಂತ ಮಾಲಿನ್ಯ ನಿಯಂತ್ರಿಸಲು ಅಂತಹ ಸುಮಾರು 40,000 ಗೋಪುರಗಳು ಬೇಕಾಗುತ್ತವೆ. ಈ ಸಂಶೋಧನೆಗಳನ್ನು ಗಮನಿಸಿದರೆ, ಬಾಂಬೆ ಮತ್ತು ದೆಹಲಿ ಐಐಟಿಗಳು ನೀಡಿದ್ದ ವರದಿಯ ಫಲಿತಾಂಶ ಅಂಗೀಕರಿಸಿ ಮಾಲಿನ್ಯ ನಿಯಂತ್ರಣದ ಬಗ್ಗೆ ತಾಂತ್ರಿಕ ಮಾಹಿತಿ ಹಂಚಿಕೊಳ್ಳುವುದಕ್ಕಾಗಿ, ಈಗ ನಿರ್ಮಿಸಿರುವ ಗೋಪುರಗಳನ್ನು ವಸ್ತುಸಂಗ್ರಹಾಲಯವಾಗಿ ಬಳಸುವಂತೆ ಸಮಿತಿ ಸಲಹೆ ನೀಡಿದೆ.
ರಾಜಧಾನಿಯ ವಾಯು ಮಾಲಿನ್ಯದ ಕುರಿತು ದೆಹಲಿ ಎನ್‌ಜಿಟಿ ಪ್ರಧಾನ ಪೀಠ ಸ್ವಯಂ ಪ್ರೇರಿತವಾಗಿ ಆರಂಭಿಸಿದ್ದ ವಿಚಾರಣೆ ವೇಳೆ ಪ್ರತಿಕ್ರಿಯೆಯಾಗಿ ಡಿಪಿಸಿಸಿ ಸಲ್ಲಿಸಿದ ʼಕ್ರಮ ಕೈಗೊಂಡ ವರದಿʼಯಲ್ಲಿ ಈ ವಿಚಾರ ತಿಳಿಸಲಾಗಿದೆ.
ಕನ್ನಾಟ್ ಪ್ಲೇಸ್ ಮತ್ತು ಆನಂದ್ ವಿಹಾರ್‌ನಲ್ಲಿ ಸ್ಥಾಪಿಸಲಾದ ಎರಡು ಹೊಂಜು ಗೋಪುರಗಳಲ್ಲಿ ಒಂದು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಮಾಧ್ಯಮ ವರದಿ ಆಧರಿಸಿ ಹೂಡಲಾಗಿದ್ದ ಪ್ರಕರಣವನ್ನು ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯ ಸುಧೀರ್ ಅಗರ್‌ವಾಲ್ ಮತ್ತು ತಜ್ಞ ಡಾ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಐಐಟಿ ಬಾಂಬೆ ಮತ್ತು ಐಐಟಿ ದೆಹಲಿ ನಡೆಸಿದ ಎರಡು ವರ್ಷಗಳ ಅಧ್ಯಯನ ಸೂಚಿಸಿರುವಂತೆ ಎರಡೂ ಗೋಪುರಗಳು ಪರಿಣಾಮ ಬೀರುತ್ತಿಲ್ಲ. ಅದರ ಹೊರತಾಗಿಯೂ, ನವೆಂಬರ್ 7ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಆನಂದ್ ವಿಹಾರ್‌ನಲ್ಲಿರುವ ಗೋಪುರ ಕಾರ್ಯಾರಂಭ ಮಾಡಿದೆ ಎಂದು ಡಿಪಿಸಿಸಿ ಹೇಳಿದೆ.
ಒಂದು ಟವರ್‌ನ ಬಂಡವಾಳ ₹ 25 ಕೋಟಿ ಆಗಿದ್ದು, ತಿಂಗಳಿಗೆ ₹ 10 ರಿಂದ 15 ಲಕ್ಷ ಪುನರಾವರ್ತಿತ ವೆಚ್ಚ ಉಂಟಾಗುವುದರಿಂದ ಹೊಂಜು ಗೋಪುರಗಳ ಬಳಕೆ ಸಮರ್ಥನೀಯವಲ್ಲ ಎಂದು ಡಿಪಿಸಿಸಿ ತೀರ್ಮಾನಿಸಿದೆ. ನವೆಂಬರ್ 20 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.