
ಔಪಚಾರಿಕ ಲಿಖಿತ ದೂರುಗಳಿಗೆ ವ್ಯತಿರಿಕ್ತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕಾರಿಗಳಿಗೆ ನೀಡಿದ ದೂರು ಮಹತ್ವ ಕಳೆದುಕೊಳ್ಳುವುದಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಾಹಕರು ನೀಡುವ ಪ್ರತಿಕ್ರಿಯೆ ದೂರುಗಳ ಸ್ವೀಕರಿಸುವ ಒಪ್ಪಿತ ವಿಧಾನವಾಗಿದೆ ಎಂದು ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಹೇಳಿದರು.
ದಕ್ಷಿಣ ಮಧ್ಯ ರೈಲ್ವೇ ತನ್ನ ಒಪ್ಪಂದ ರದ್ದುಗೊಳಿಸುವುದನ್ನು ಪ್ರಶ್ನಿಸಿ ಕೇಟರಿಂಗ್ ಅಂಗಡಿ ಮಾಲೀಕ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿಗಳು ಈ ವಿಚಾರ ತಿಳಿಸಿದರು.
"ಸಾಮಾಜಿಕ ಮಾಧ್ಯಮದಲ್ಲಿ ನೀಡುವ ದೂರು ಇಲ್ಲವೇ ಗ್ರಾಹಕರ ಪ್ರತಿಕ್ರಿಯೆ ಎಂಬುದು ಸೇವಾ ಪೂರೈಕೆದಾರರ ವಿರುದ್ಧ ದೂರು ನೋಂದಾಯಿಸುವ ಸ್ವೀಕಾರಾರ್ಹ ವಿಧಾನವಾಗಿದೆ. ಸಾಮಾಜಿಕ ಮಾಧ್ಯಮದ ದೂರುಗಳು ಗಂಭೀರವಾಗಿ ಪರಿಗಣಿಸಲು ಅರ್ಹವಲ್ಲ ಎಂದು ನೆಪವೊಡ್ಡಿ ಅರ್ಜಿದಾರರು ದೂರನ್ನು ಉಪೇಕ್ಷಿಸಲು ಹೇಳುವಂತಿಲ್ಲ" ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಕಳಪೆ ಗುಣಮಟ್ಟದ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದ ಟೀ ಅಂಗಡಿ ಮಾಲೀಕನ ವಿರುದ್ಧ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ರೈಲ್ವೆ ಇಲಾಖೆಗೆ ವಿವಿಧ ದೂರುಗಳನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಂಗಡಿ ಮಾಲೀಕನ ವಿರುದ್ಧದ ಒಪ್ಪಂದ ರದ್ದುಗೊಳಿಸಿತ್ತು. ಇದನ್ನು ಅಂಗಡಿ ಮಾಲೀಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಲೋಪ ಸರಿಪಡಿಸಲು ಒಪ್ಪಂದ ಮಾಡಿಕೊಂಡ ವ್ಯಕ್ತಿಗೆ ಅನೇಕ ಅವಕಾಶಗಳನ್ನು ನೀಡಲಾಗಿದ್ದರೂ ಸೇವಾ ನ್ಯೂನತೆ ಮುಂದುವರೆದಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.
" ದೂರುಗಳು ನಿಜವಾಗಿಯೂ ಗಂಭೀರ ಸ್ವರೂಪದ್ದಾಗಿವೆ. ಏಕೆಂದರೆ ಅವು ಕಳಪೆ ಗುಣಮಟ್ಟದ ಆಹಾರಕ್ಕೆ ಸಂಬಂಧಿಸಿರುವುದಷ್ಟೇ ಅಲ್ಲದೆ ಶಿಫಾರಸು ಮಾಡಿದ ತೂಕಕ್ಕಿಂತಲೂ ಕಡಿಮೆ ತೂಕದ ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಆಹಾರ ಪೂರೈಕೆಗೆ ಸಂಬಂಧಿಸಿವೆ" ಎಂದು ನ್ಯಾಯಾಲಯ ಹೇಳಿದೆ.