ಗಮನಾರ್ಹ ಮೊತ್ತದ ರಿಪೇರಿ ಶುಲ್ಕ ಪಾವತಿಸಿ ಅನೇಕ ಬಾರಿ ಮೊಬೈಲ್ ಫೋನ್ ದುರಸ್ತಿ ಮಾಡಿಸಿದರೂ ಅದನ್ನು ಸರಿಪಡಿಸದೇ ಹೋದದ್ದಕ್ಕಾಗಿ ಗ್ರಾಹಕರೊಬ್ಬರಿಗೆ ₹33,500 ಪರಿಹಾರ ನೀಡುವಂತೆ ಫೋನ್ ತಯಾರಿಕಾ ಕಂಪೆನಿ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಕೇಂದ್ರ ಮುಂಬೈನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ [ಆಕಾಶ್ ರಮೇಶ್‌ಕುಮಾರ್ ಗುಪ್ತಾ ವಿರುದ್ಧ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ].
ಫೋನ್ ದುರಸ್ತಿ ಮಾಡಿದರೂ ದೋಷ ಪರಿಹಾರವಾಗಲಿಲ್ಲ ಎಂಬುದನ್ನು ಅಧ್ಯಕ್ಷೆ ವಂದನಾ ಮಿಶ್ರಾ ಮತ್ತು ಸದಸ್ಯ ಸಂಜಯ್ ಎಸ್ ಜಗದಾಳೆ ಅವರಿದ್ದ ಆಯೋಗ ಗಮನಿಸಿತು.
ಇಷ್ಟಾದರೂ ಕಂಪೆನಿ ದೂರುದಾರರ ಹಾನಿಗೊಳಗಾದ ಮೊಬೈಲ್ ಬದಲು ಬೇರೆ ಮೊಬೈಲ್ ನೀಡಲು ಮುಂದಾಗಿಲ್ಲ. ಹೀಗಾಗಿ ಕಂಪೆನಿಯ ಸೇವಾ ನ್ಯೂನತೆ ಕುರಿತಂತೆ ದೂರುದಾರ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನವೆಂಬರ್ 6ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
2020ರಲ್ಲಿ ದೂರುದಾರ ಫೋನ್ ಖರೀದಿಸಿದ್ದರು. ಆದರೆ ಸಾಫ್ಟ್‌ವೇರ್ ನವೀಕರಣದ ನಂತರ ಕಾಣಿಸಿಕೊಂಡ ದೋಷ ಪರಿಹರಿಸಲು ಶಓಮಿ ವಿಫಲವಾಗಿದ್ದು ದುರಸ್ತಿಗಾಗಿ ₹10,500 ಪಾವತಿಸಿದ ನಂತರವೂ ಸಮಸ್ಯೆ ಮುಂದುವರಿದಿದೆ ಎಂದು ಅವರು ಆರೋಪಿಸಿದ್ದರು.
ಶಓಮಿ ಕಂಪೆನಿಯಿಂದ ಹೆಚ್ಚಿನ ಬೆಂಬಲ ಕೋರಿ ಸೇವಾ ಕೇಂದ್ರಕ್ಕೆ ಹಲವು ಬಾರಿ ಭೇಟಿ ನೀಡಿದರೂ ಅದು ಹ್ಯಾಂಡ್‌ಸೆಟ್ಟನ್ನು ಸೂಕ್ತ ರೀತಿಯಲ್ಲಿ ರಿಪೇರಿ ಮಾಡಲು ಇಲ್ಲವೇ ಬದಲಿಸಲು ವಿಫಲವಾಯಿತು. ಹೀಗಾಗಿ ದೂರುದಾರರು ಮೇ 26, 2023ರಂದು ಶಓಮಿಗೆ ಲೀಗಲ್ ನೋಟಿಸ್ ನೀಡಿದರು,
ಆದರೆ ದೂರುದಾರರ ಲೀಗಲ್ ನೋಟಿಸ್‌ಗೆ ಶಓಮಿ ಪ್ರತಿಕ್ರಿಯಿಸಲಿಲ್ಲ. ಜೊತೆಗೆ ಆಯೋಗದೆದುರು ವಿಚಾರಣೆಗೆ ಹಾಜರಾಗಲಿಲ್ಲ ಎಂಬುದನ್ನು ಗಮನಿಸಿದ ಆಯೋಗ ದೂರುದಾರರ ಸಾಕ್ಷ್ಯಾಧಾರ ಮತ್ತು ವಾದವನ್ನಷ್ಟೇ ಆಲಿಸಿ ಏಕಪಕ್ಷೀಯ ಆದೇಶ ನೀಡಿತು.
ಶಓಮಿಯ ನಿರ್ಲಕ್ಷ್ಯದಿಂದಾಗಿ ದೂರುದಾರ ಗುಪ್ತಾ ಅವರು ಆರ್ಥಿಕ ನಷ್ಟ ಮತ್ತು ಮಾನಸಿಕ ಸಂಕಟ ಎರಡನ್ನೂ ಅನುಭವಿಸಿದ್ದಾರೆ. ತಮ್ಮ ಅಹವಾಲಿಗೆ ಸಂಬಂಧಿಸಿದಂತೆ ಅವರು ಒದಗಿಸಿದ ದಾಖಲೆಗಳು ವಿಶ್ವಾಸಾರ್ಹವಾಗಿದ್ದು ಪರಿಹಾರ ನೀಡಲು ಸಾಕಾಗುತ್ತದೆ ಎಂದು ಆಯೋಗ ಹೇಳಿದೆ.
ಅಂತೆಯೇ ದೂರನ್ನು ಭಾಗಶಃ ಪುರಸ್ಕರಿಸಿದ ಅದು ಶಓಮಿ ₹18,500 ಮರುಪಾವತಿ ಮಾಡಬೇಕು. ಅಲ್ಲದೆ ದೂರುದಾರ ಅನುಭವಿಸಿದ ಮಾನಸಿಕ ಸಂಕಷ್ಟ ಹಾಗೂ ಸೇವಾ ನ್ಯೂನತೆಗಾಗಿ ಅವರಿಗೆ ₹10,000 ಪರಿಹಾರ ಪಾವತಿಸಬೇಕು. ಜೊತೆಗೆ ವ್ಯಾಜ್ಯ ವೆಚ್ಚಕ್ಕಾಗಿ ₹5,000 ನೀಡಬೇಕು ಎಂದು ಆದೇಶಿಸಿತು.