ಸಮಾಜ ಅತ್ಯಂತ ಆಕ್ಷೇಪಾರ್ಹ ಎಂದು ಭಾವಿಸುವ ಕ್ರಿಯೆಗಳನ್ನು ವಾಕ್ ಸ್ವಾತಂತ್ರ್ಯ ರಕ್ಷಿಸುತ್ತದೆ.. ಸಮಾಜದ ಆಕ್ರೋಶ ವಾಕ್ ಸ್ವಾತಂತ್ರ್ಯ ರಕ್ಷಿಸಲು ಸಮರ್ಥನೆಯಾಗಬಾರದು ಎಂದು ದೆಹಲಿ ನ್ಯಾಯಾಲಯ ಹೇಳಿದೆ ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇರಳ ಶಾಸಕ ಕೆ ಟಿ ಜಲೀಲ್ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. [ಜಿ ಎಸ್ ಮಣಿ ಮತ್ತು ದೆಹಲಿ ಪೊಲೀಸ್ ಕಮಿಷನರ್ ಇನ್ನಿತರರ ನಡುವಣ ಪ್ರಕರಣ] .
ಶಾಸಕರ ಹೇಳಿಕೆಯು ವಾಸ್ತವಿಕತೆ ಮತ್ತು ಸತ್ಯವನ್ನು ತೊರೆದು ಅನಗತ್ಯ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ತರಾತುರಿಯಲ್ಲಿ ಮಾಡಿದ ಹೇಳಿಕೆಯಂತೆ ತೋರುತ್ತಿದೆ. ಆದರೆ ಇತಿಹಾಸ ಅಥವಾ ರಾಷ್ಟ್ರೀಯತೆಯನ್ನು ಬೋಧಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜೀತ್ ಸಿಂಗ್ ಜಸ್ಪಾಲ್ ತಿಳಿಸಿದರು.
"... ಕಟ್ಟುನಿಟ್ಟಾದ ಪದಗಳಲ್ಲಿ ಖಂಡಿಸುವ ರೀತಿಯಲ್ಲಿ ಹೇಳಿಕೆ ಇದೆ. ಆದರೆ ಇತಿಹಾಸ ಅಥವಾ ರಾಷ್ಟ್ರೀಯತೆಯನ್ನು ಕಲಿಸಲು ಇಲ್ಲವೆ ಮಿಥ್ಯ ನಂಬಿಕೆಗಳು ಅಥವಾ ಸಂಗತಿಗಳನ್ನು ಸರಿಪಡಿಸಲು ಈ ನ್ಯಾಯಾಲಯ ಇಲ್ಲ” ಎಂದು ನ್ಯಾಯಾಧೀಶರು ತಿಳಿಸಿದರು.
"ಕಾಶ್ಮೀರದ ಜನರು ಸಂತೋಷವಾಗಿಲ್ಲ" ಎಂಬ ಜಲೀಲ್ ಅವರ ಹೇಳಿಕೆಯನ್ನು ಅವರ ಅಭಿಪ್ರಾಯ ಎಂದು ಕರೆಯಬಹುದಾಗಿದ್ದು ಯಾವುದೇ ಅಧಿಕಾರಿ ಅಥವಾ ಸಮೀಕ್ಷೆಯಿಂದ ಅದಕ್ಕೆ ಬೆಂಬಲ ದೊರೆಯದಿದ್ದರೂ ಸಂವಿಧಾನದ 19ನೇ ವಿಧಿಯ ಮೂಲಕ ಒದಗಿಸಲಾದ ಮೂಲಭೂತವಾದ ವಾಕ್ ಸ್ವಾತಂತ್ರ್ಯದಿಂದ ಅವರ ಹೇಳಿಕೆಗೆ ರಕ್ಷಣೆ ಇದೆ” ಎಂದು ನ್ಯಾಯಾಲಯ ಹೇಳಿದೆ.
ಸಮಾಜ ಅತ್ಯಂತ ಆಕ್ರಮಣಕಾರಿ ಎಂದು ಭಾವಿಸುವ ಕ್ರಿಯೆಗಳನ್ನು ವಾಕ್ ಸ್ವಾತಂತ್ರ್ಯ ರಕ್ಷಿಸಲಿದ್ದು ಸಮಾಜದ ಆಕ್ರೋಶದ ಕಾರಣಕ್ಕಾಗಿಯೇ ವಾಕ್ ಸ್ವಾತಂತ್ರ್ಯ ಹತ್ತಿಕ್ಕಬೇಕಾಯಿತು ಎಂಬ ಸಮರ್ಥನೆ ಸಲ್ಲದು ಎಂದು ಅದು ವಿವರಿಸಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಶಾಸಕ ಜಲೀಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಉದ್ದೇಶಿಸಿ “ಭಾರತ ಆಕ್ರಮಿತ ಕಾಶ್ಮೀರʼ ಮತ್ತು ಆಜಾದ್ ಕಾಶ್ಮೀರ ಪದಗಳನ್ನು ಬಳಸಿ ಅಲ್ಲಿನ ಜನ ಸಂತೋಷವಾಗಿಲ್ಲ ಎಂದಿದ್ದರು. ಇದನ್ನು ಪ್ರಶ್ನಿಸಿ ಜಿ ಎಸ್ ಮಣಿ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]