ಸಾಫ್ಟ್‌ವೇರ್‌ ಎಂಜಿನಿಯರ್‌ ಕೊಲೆ ಪ್ರಕರಣ: ವಕೀಲ ಮಹೇಂದ್ರಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಪ್ರತಿಯೊಬ್ಬ ನಾಗರಿಕನಿಗೂ ಆತ್ಮರಕ್ಷಣೆಯ ಹಕ್ಕಿದೆ. ಈ ಪ್ರಕರಣದಲ್ಲೂ ಅರ್ಜಿದಾರರು ತಮ್ಮ ಆತ್ಮರಕ್ಷಣೆಗಾಗಿ ಹಲ್ಲೆ ನಡೆಸಿದ್ದರು. ಇದರಿಂದ ಅರುಣ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ಉದ್ದೇಶಪೂರ್ವಕವಲ್ಲ ಎಂದು ವಾದ.
Karnataka High Court
Karnataka High Court

ಸಾಫ್ಟ್‌ವೇರ್ ಎಂಜನಿಯರ್ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಗರದ ವಕೀಲ ಎಲ್ ಮಹೇಂದ್ರಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಎಲ್ ಮಹೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಮಹೇಂದ್ರ ತಮ್ಮ ಪತ್ನಿ ಮತ್ತು ಎರಡು ವರ್ಷದ ಪುತ್ರನ ಜೊತೆಗೆ ಚಂದಾಪುರದ ಜೆಪಿಆರ್ ಲೇಔಟ್‌ನಲ್ಲಿ 2019ರಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಈ ಅವಧಿಯಲ್ಲಿ ಮನೆ ಮಾಲೀಕನ ಮಗ ಸಂತೋಷ್ ಕುಮಾರ್‌ ಅವರು ಮಹೇಂದ್ರ ಪತ್ನಿ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದರು. ಇದರಿಂದ ಬೇಸತ್ತ ಮಹೇಂದ್ರ ಸದರಿ ಮನೆ ತ್ಯಜಿಸಿ, ಬೇರೆ ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದರು.

ಈ ಮಧ್ಯೆ, ವ್ಯಾಸಂಗಕ್ಕಾಗಿ ಫ್ರಾನ್ಸ್‌ಗೆ ತೆರಳಿದ್ದ ಸಂತೋಷ್ ಕುಮಾರ್ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿಗೆ ಮರಳಿದ್ದರು. ಆಗ ಮತ್ತೆ ಮಹೇಂದ್ರ ಅವರ ಪತ್ನಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಇದೇ ಉದ್ದೇಶದಿಂದ ತನ್ನ ಸ್ನೇಹಿತ ಸಾಫ್ಟ್‌ವೇರ್ ಎಂಜಿನಿಯರ್ ಅರುಣ್ ಜೊತೆಗೆ 2022ರ ಏಪ್ರಿಲ್‌ 13ರಂದು ಎಚ್‌ಎಸ್‌ಆರ್ ಠಾಣಾ ವ್ಯಾಪ್ತಿಯ ಮದೀನಾ ಮಸೀದಿ ಬಳಿ ವಾಸವಿದ್ದ ಮಹೇಂದ್ರ ಮನೆಗೆ ಬೆಳಿಗ್ಗೆಯೇ ತೆರಳಿದ್ದರು.

ಈ ವೇಳೆ ನಡೆದ ಜಗಳದಲ್ಲಿ ಮಹೇಂದ್ರ ಅವರು ಅರುಣ್‌ಗೆ ಚಾಕುವಿನಿಂದ ಇರಿದಿದ್ದರು. ತೀವ್ರ ಗಾಯಗೊಂಡ ಅರುಣ್ ಕ್ಯಾಂಬೆಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಆದರೆ, ಕೆಲ ದಿನಗಳ ನಂತರ ಅವರು ಸಾವನ್ನಪ್ಪಿದ್ದರು. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಮಹೇಂದ್ರ ಅವರನ್ನು ಬಂಧಿಸಿದ್ದರು. ವಿಚಾರಣಾಧೀನ ನ್ಯಾಯಾಲಯ ಜಾಮೀನು ನಿರಾಕರಿಸಿ, ಮಹೇಂದ್ರ ಅವರನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಮಹೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲ ಎಚ್ ಪವನಚಂದ್ರ ಶೆಟ್ಟಿ ಅವರು “ಭಾರತೀಯ ದಂಡ ಸಂಹಿತೆಯ ಸೆಕ್ಷನ್ 99 ಮತ್ತು 100ರ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಆತ್ಮರಕ್ಷಣೆಯ ಹಕ್ಕಿದೆ. ಈ ಪ್ರಕರಣದಲ್ಲೂ ಅರ್ಜಿದಾರರು ತಮ್ಮ ಆತ್ಮರಕ್ಷಣೆಗಾಗಿ ಹಲ್ಲೆ ನಡೆಸಿದ್ದರು. ಇದರಿಂದ ಅರುಣ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಇದು ಉದ್ದೇಶಪೂರ್ವಕವಲ್ಲದ ಕೊಲೆಯಾಗಿದ್ದು, ಜಾಮೀನು ನೀಡಬೇಕು” ಎಂದು ಕೋರಿದ್ದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್‌ ಮಹೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿದೆ.

Related Stories

No stories found.
Kannada Bar & Bench
kannada.barandbench.com