ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಕಂಪೆನಿ ಸಮೂಹಗಳ ವಿರುದ್ಧ ಮಾಡಲಾಗಿದ್ದ ವಂಚನೆ ಆರೋಪ ಪರಿಶೀಲಿಸಲು ತಾನು ರಚಿಸಿರುವ ತಜ್ಞರ ಸಮಿತಿಯಲ್ಲಿ ವಕೀಲ ಸೋಮಶೇಖರ್ ಸುಂದರೇಶನ್ ಅವರ ಸೇರ್ಪಡೆ ಬಗ್ಗೆ ಎತ್ತಲಾಗಿರುವ ಆಕ್ಷೇಪಣೆಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುಂದರೇಶನ್ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ಅರ್ಜಿದಾರರ ಹೇಳಿಕೆ ಆಧಾರರಹಿತ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ್ತುಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ವಿಚಾರಣೆ ನಡೆಸಿದ್ದ ಪ್ರಕರಣವೊಂದರಲ್ಲಿ ಸುಂದರೇಶನ್ ಅವರು ಅದಾನಿ ಸಮೂಹವನ್ನು ವಕೀಲರಾಗಿ ಪ್ರತಿನಿಧಿಸಿದ್ದರು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಗಮನಸೆಳೆದರು. ಆಗ ಸಿಜೆಐ ಇದು 17 ವರ್ಷಗಳ ಹಿಂದಿನ ಪ್ರಕರಣವಾಗಿದ್ದು ಸುಂದರೇಶನ್ ಅದಾನಿ ಅವರ ಆಂತರಿಕ ಸಲಹೆಗಾರರಲ್ಲ ಎಂದು ಹೇಳಿದರು.
"ಅವರು [ಅದಾನಿ ಸಮೂಹದ] ಆಂತರಿಕ ಸಲಹೆಗಾರರಾಗಿರಲಿಲ್ಲ, ವಕೀಲರಾಗಿದ್ದರು. 2006 ರಲ್ಲಿ ಅವರು ವಿಚಾರಣೆಯಲ್ಲಿ ವಾದ ಮಂಡಿಸಿದ್ದು (ಅರ್ಜಿದಾರರು ಆರೋಪಿಸುತ್ತಿರುವ) ಹಿತಾಸಕ್ತಿ ಸಂಘರ್ಷ 17 ವರ್ಷಗಳ ನಂತರ ಉದ್ಭವಿಸಿದೆಯೇ... ಅರ್ಜಿದಾರರು ಮಾಡುವ ಆರೋಪಗಳಿಗೆ ಸ್ವಲ್ಪವಾದರೂ ಜವಾಬ್ದಾರಿ ಇರಬೇಕು. ಹೀಗೆ ಮಾಡುವುದು ಸಮಿತಿಗೆ ತುಂಬಾ ಅನ್ಯಾಯಕರ. ಹೀಗೆ ಮಾಡಿದರೆ ನ್ಯಾಯಾಲಯ ನೇಮಿಸುವ ಯಾವುದೇ ಸಮಿತಿಗಳಿಗೆ ಕೆಲಸ ಮಾಡುವುದನ್ನೇ ಜನ ನಿಲ್ಲಿಸಿಬಿಡುತ್ತಾರೆ" ಎಂದು ಸಿಜೆಐ ಹೇಳಿದರು.
ತಜ್ಞರ ಸಮಿತಿಯ ಸದಸ್ಯರನ್ನಾಗಿ ಕೇವಲ ನಿವೃತ್ತ ನ್ಯಾಯಾಧೀಶರನ್ನೇ ನೇಮಿಸುವ ಬದಲು ವಿಷಯ ತಜ್ಞರು ಇರಲಿ ಎಂದು ನ್ಯಾಯಾಲಯ ಸದರಿ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ನೇಮಿಸಿದೆ ಎಂಬುದಾಗಿ ನ್ಯಾಯಾಲಯ ವಿವರಿಸಿದೆ.
ಅಲ್ಲದೆ ಸುಂದರೇಶನ್ ಅವರು ಅದಾನಿ ಪರ ಕಾಣಿಸಿಕೊಂಡ ಒಂದು ನಿದರ್ಶನದ ಮೇಲಷ್ಟೇ ಪ್ರಶಾಂತ್ ಭೂಷಣ್ ಅವಲಂಬಿತರಾಗಿದ್ದಾರೆ ಎಂದು ನ್ಯಾಯಾಲಯ ಬೆರಳು ಮಾಡಿದೆ.
"ನೀವು ಈ ಬಗ್ಗೆ ಮಾರ್ಚ್ 2 2023ರಂದೇ (ಸಮಿತಿ ರಚಿಸಿದಾಗ) ಹೇಳಬೇಕಿತ್ತು... ಹಾಗಾದರೆ 17 ವರ್ಷಗಳ ಹಿಂದೆ ಹಾಜರಾದ ವಕೀಲರನ್ನು ಈಗ ಸಮಿತಿಗೆ ನೇಮಿಸಲು ಸಾಧ್ಯ ಇಲ್ಲವೇ? ಇದನ್ನು ಪರಿಗಣಿಸುವುದಾದರೆ ಆರೋಪಿಯ ಪರ ವಾದ ಮಂಡಿಸಿದ್ದ ಯಾವುದೇ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸಲು ಸಾಧ್ಯವಾಗುವುದಿಲ್ಲ. ಇದನ್ನು ಹೇಗೆ ಅನುಮತಿಸಲು ಸಾಧ್ಯ? ಇದನ್ನು ಬಿಟ್ಟು ಬೇರೆ ನಿದರ್ಶನಗಳ ಬಗ್ಗೆ ನೀವು ಉಲ್ಲೇಖಿಸಿಲ್ಲ. ಹಾಗಾದರೆ ಈ ಆಧಾರರಹಿತ ಆರೋಪಗಳನ್ನು ನಾವು ಹೇಗೆ ಪರಿಗಣಿಸಲಾದೀತು?" ಎಂದು ಸಿಜೆಐ ಪ್ರಶ್ನಿಸಿದರು.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಹಸಿರು ನಿಶಾನೆ ದೊರೆತ ಬಳಿಕ ಸುಂದರೇಶನ್ ವಕೀಲಿಕೆ ನಿಲ್ಲಿಸಿದ್ದಾರೆ.
ಅದಾನಿ ನಡೆ ಬಗ್ಗೆ ನಿರ್ಧರಿಸಲು ಸೆಬಿ ಪತ್ರಿಕೆ ವರದಿಗಳನ್ನು ಅನುಸರಿಸಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಕೂಡ ನ್ಯಾಯಾಲಯ ಶುಕ್ರವಾರದಂದು ನಡೆದ ವಿಚಾರಣೆ ವೇಳೆ ಹೇಳಿತ್ತು.
ಹಿಂಡನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಸಮೂಹದ ವಿರುದ್ಧ ಪ್ರಕಟಿಸಲಾಗಿದ್ದ ವಂಚನೆ ಆರೋಪ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರಗಳನ್ನು ತಿಳಿಸಿತು. ಅರ್ಜಿದಾರರಲ್ಲಿ ಒಬ್ಬರಾದ ಅನಾಮಿಕಾ ಜೈಸ್ವಾಲ್, ತಜ್ಞರ ಸಮಿತಿಯ ಸದಸ್ಯರ ನೇಮಕಾತಿಯಿಂದ ಹಿತಾಸಕ್ತಿ ಸಂಘರ್ಷ ಉಂಟಾಗಿದ್ದು ಸೆಬಿಯಿಂದ ಸತ್ಯ ಮರೆಮಾಚಲಾಗಿದೆ ಎಂದು ಆರೋಪಿಸಿದ್ದರು.