Supreme Court
Supreme Court

ಕೆಲವು ವೀರರನ್ನು ಸ್ಮರಿಸುವುದೇ ಇಲ್ಲ: ಪಾಕ್‌ ಸೆರೆಹಿಡಿದಿದ್ದ ಗೂಢಚರನ ಪಿಂಚಣಿ ಸಮಸ್ಯೆ ಕುರಿತು ಸುಪ್ರೀಂ ವಿಷಾದ

ಗೋಪ್ಯ ಕಾರ್ಯಾಚರಣೆಗೆಂದು ಅರ್ಜಿದಾರ ಅನ್ಸಾರಿ ಅವರನ್ನು ವಿಶೇಷ ತನಿಖಾ ದಳದ ಜೈಪುರ ಶಾಖೆ ಮೂರು ಬಾರಿ ಪಾಕಿಸ್ತಾನಕ್ಕೆ ಕಳುಹಿಸಿತ್ತು. ಆದರೆ ಮೂರನೇ ಬಾರಿ ಅವರನ್ನು ಸೆರೆಹಿಡಿದು ಜೈಲಿಗೆ ಹಾಕಲಾಗಿತ್ತು.
Published on

ರಹಸ್ಯ ಕಾರ್ಯಾಚರಣೆಗಾಗಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಹಲವು ವರ್ಷಗಳ ಕಾಲ ಸೆರೆಯಲ್ಲಿದ್ದ ಅಂಚೆ ಕಚೇರಿ ನಿವೃತ್ತ ಉದ್ಯೋಗಿಯೊಬ್ಬರು ಪಿಂಚಣಿ ಸೌಲಭ್ಯಕ್ಕಾಗಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ [ಮೊಹಮ್ಮದ್‌ ಅನ್ಸಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಉದ್ಯೋಗ ನೀಡಿದ್ದ ಅಂಚೆ ಇಲಾಖೆ ಅರ್ಜಿದಾರ ಮೊಹಮ್ಮದ್‌ ಅನ್ಸಾರಿ ಅವರು ಕೆಲಸಕ್ಕೆ ಬಾರದೇ ಇದ್ದ ಅವಧಿಯನ್ನು ಉದ್ದೇಶಪೂರ್ವಕ ಗೈರು ಹಾಜರಿ ಎಂದು ಪರಿಗಣಿಸಿರುವುದನ್ನು ಗಮನಿಸಿದ ನಂತರ ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಪ್ರತಿಕ್ರಿಯೆ ಪಡೆಯುವಂತೆ ಕೇಂದ್ರ ಸರ್ಕಾರದ ವಕೀಲರಿಗೆ ಸೂಚಿಸಿತು. ಆಗಸ್ಟ್ 3ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ ನಾವು 'ಕೆಲವು ವೀರರನ್ನು ಸ್ಮರಿಸುವುದೇ ಇಲ್ಲ' ಎಂದು ವಿಷಾದಿಸಿತು.

Also Read
ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಸೇನಾ ಸಿಬ್ಬಂದಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಕಾರ್ಯಾಚರಣೆಗೆಂದು ಅರ್ಜಿದಾರರನ್ನು ವಿಶೇಷ ತನಿಖಾ ದಳದ ಜೈಪುರ ಶಾಖೆ ಮೂರು ಬಾರಿ ಪಾಕಿಸ್ತಾನಕ್ಕೆ ಕಳುಹಿಸಿತ್ತು. ಆದರೆ ಮೂರನೇ ಬಾರಿ ಆತನನ್ನು ಸೆರೆಹಿಡಿದು ಜೈಲಿಗಟ್ಟಲಾಗಿತ್ತು. 14 ವರ್ಷಗಳ ಜೈಲು ಶಿಕ್ಷೆ, ಚಿತ್ರಹಿಂಸೆ ಬಳಿಕ 1989ರಲ್ಲಿ ಪಾಕಿಸ್ತಾನದಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಈ ಮಧ್ಯೆ ಕೆಲಸಕ್ಕೆ ದೀರ್ಘಕಾಲ ಹಾಜರಾಗದ ಅವರನ್ನು ಏಕಪಕ್ಷೀಯ ಆದೇಶದ ಮೂಲಕ ಅಂಚೆ ಇಲಾಖೆ ಸೇವೆಯಿಂದ ವಜಾಗೊಳಿಸಿತ್ತು. ತಮ್ಮ ಬಿಡುಗಡೆ ಮತ್ತು ಸೇವೆಗೆ ಮರಳಿ ಸೇರಿಸಿಕೊಳ್ಳುವಂತೆ ಹಲವು ಯತ್ನಗಳನ್ನು ಅರ್ಜಿದಾರರು ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮೆಟ್ಟಿಲೇರಿದ ಪ್ರಕರಣ ಅಲ್ಲಿಂದ ಹೈಕೋರ್ಟ್‌ ಅಂಗಳಕ್ಕೆ ತಲುಪಿತ್ತು. ಅಲ್ಲಿಯೂ ಪರಿಹಾರ ದೊರೆಯದಿದ್ದಾಗ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ವಜಾಗೊಳಿಸಿದ ಆದೇಶ ಮತ್ತು ಅದರ ನಡಾವಳಿಗಳ ಯಾವುದೇ ಪ್ರತಿಯನ್ನು ನೀಡಿಲ್ಲ ಮತ್ತು ಗೈರುಹಾಜರಿಗೆ ಕಾರಣ ವಿವರಿಸಲು ತನಗೆ ಅವಕಾಶ ನೀಡಲಿಲ್ಲ. ಅಲ್ಲದೆ ಗೈರುಹಾಜರಿಯ ಕಾರಣದ ಬಗ್ಗೆ ಅಂಚೆ ಇಲಾಖೆಗೆ ತಿಳಿದಿತ್ತು. ಆದರೆ ವಿವಿಧ ನ್ಯಾಯಾಲಯಗಳು ಅದನ್ನು ಪರಿಗಣಿಸಲಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. 1978ರಲ್ಲಿ ಪಾಕಿಸ್ತಾನ ಸರ್ಕಾರ ಅರ್ಜಿದಾರರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 1989ರಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆನಂತರ ದೇಶಕ್ಕೆ ಹಿಂದಿರುಗಿದ ಅರ್ಜಿದಾರರು ಈವರೆಗೆ ಕಾನೂನು ಹೋರಾಟ ಮುಂದುವರಿಸಿದ್ದಾರೆ.

Kannada Bar & Bench
kannada.barandbench.com