“ಯಾರದೋ ಕೋಪ ಯಾರ ಮೇಲೋ ತೋರಿಸೋದು” ಎಂದು ಮೌಖಿಕವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್, ಸುದ್ದಿ ನಿರೂಪಕ ರಾಹುಲ್ ಶಿವಶಂಕರ್ ವಿರುದ್ಧದ ಕೋಮು ದ್ವೇಷ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಗುರುವಾರ ಸೂಚಿಸಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸಿ ತಾವು ಮಾಡಿರುವ ಆದೇಶದ ಸುದ್ದಿಯನ್ನು ರಾಹುಲ್ ಶಿವಶಂಕರ್ ಅವರು ವರದಿ ಮಾಡಿದ್ದರು. ಇದರ ಬೆನ್ನಿಗೇ ಮಾರ್ಚ್‌ನಿಂದ ಬಾಕಿ ಇರುವ ಪ್ರಕರಣದಲ್ಲಿ ರಾಹುಲ್ ಶಿವಶಂಕರ್‌ಗೆ ತನಿಖೆಗೆ ಅಕ್ಟೋಬರ್ 10ರ ಒಳಗೆ ಹಾಜರಾಗಲು ಸಿಐಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ವಕೀಲ ಅಭಿಷೇಕ್ ಕುಮಾರ್ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಗಮನಸೆಳೆದರು.
ಆಗ ಪೀಠವು “ಪ್ರಕರಣದಲ್ಲಿ ಮಧ್ಯಂತರ ಆದೇಶ ಇದೆಯೇ. ಮಧ್ಯಂತರ ಆದೇಶ ಇದ್ದರೆ ಏನೂ ಮಾಡಲಾಗದು” ಎಂದಿತು.
ಆಗ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಆತುರದ ನಿರ್ಧಾರಕ್ಕೆ ಮುಂದಾಗಬಾರದು ಎಂದು ಆದೇಶ ಮಾಡಲಾಗಿದೆ. ರಾಹುಲ್ ಶಿವಶಂಕರ್ ಅವರನ್ನು ಖುದ್ದು ವಿಚಾರಣೆಗೆ ಹಾಜರಾಗುವಂತೆ ಹೇಳುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಮಾತ್ರ ಸೂಚಿಸಲಾಗಿದೆ” ಎಂದರು.
ಇದಕ್ಕೆ ಅಭಿಷೇಕ್ ಅವರು “ಹಲವು ತಿಂಗಳಿಂದ ಪ್ರಕರಣದಲ್ಲಿ ಏನೂ ಮಾಡಿಲ್ಲ. ಮುಡಾ ಪ್ರಕರಣದ ಸುದ್ದಿ ವರದಿ ಮಾಡಿದೆ ಎಂಬ ಏಕೈಕ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ” ಎಂದರು. ಆಗ ಪೀಠವು ನಾಳೆ ಪ್ರಕರಣವನ್ನು ಪಟ್ಟಿ ಮಾಡಬೇಕು. “ಸುಮ್ನೆ ಯಾರದೋ ಕೋಪವನ್ನು ಯಾರದೋ ಮೇಲೆ ಹಾಕೋದು” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಅಕ್ಟೋಬರ್ 4ರ 10.30ರ ಒಳಗೆ ಬೆಂಗಳೂರಿನ ಕಾರ್ಲಟನ್ ಹೌಸ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಶಿವಶಂಕರ್ ಅವರಿಗೆ ಡಿಟೆಕ್ಟಿವ್ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಹುಂದ್ರಾದ್ ಸೆಪ್ಟೆಂಬರ್ 25ರಂದು ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆಯು 2024ರ ಮಾರ್ಚ್ 21ರಂದು ಕೊನೆಯ ಬಾರಿಗೆ ವಿಚಾರಣೆ ನಡೆದಿತ್ತು. ಅಂದಿನಿಂದ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿರಲಿಲ್ಲ.
ಪ್ರಕರಣದ ಹಿನ್ನೆಲೆ: ಮಂಗಳೂರಿನ ವಕ್ಫ್ ಆಸ್ತಿಗಳು ಮತ್ತು ಹಜ್ ಭವನ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಪ್ರಾರ್ಥನಾ ಸ್ಥಳಗಳಿಗೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿರುವುದರ ಸಂಬಂಧ ರಾಹುಲ್ ಶಿವಶಂಕರ್ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೋಲಾರದ ಕೌನ್ಸಿಲರ್ ಎನ್ ಅಂಬರೀಷ್ ಅವರು ರಾಹುಲ್ ಶಿವಶಂಕರ್ ಅವರಿಗೆ ಕೋಮು ದ್ವೇಷ ಹರಡುವ ಚಾಳಿಯಿದೆ ಎಂದು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 153ಎ ಮತ್ತು 505 ಅಡಿ ಪ್ರಕರಣ ದಾಖಲಿಸಲಾಗಿದೆ.