ಎಲ್ಲಾ ಸಂಸದರ ಮೇಲೆ ಡಿಜಿಟಲ್ ಕಣ್ಗಾವಲು ಹಾಕಲು ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸಂಸದರ ಮೇಲೆ ಸಿಸಿಟಿವಿ ಮೂಲಕ ದಿನದ 24 ಗಂಟೆಯೂ ನಿಗಾ ಇರಿಸಬೇಕು ಮತ್ತು ನಾಗರಿಕರು ಈ ವಿಡಿಯೋವನ್ನು ತಮ್ಮ ಫೋನ್‌ಗಳ ಮೂಲಕ ನೋಡುವ ಅವಕಾಶವಿರಬೇಕು ಎಂದು ವಾದಿಸಿದ ಅರ್ಜಿದಾರ.
Supreme Court of India
Supreme Court of India

ಉತ್ತಮ ಆಡಳಿತಕ್ಕಾಗಿ ಭಾರತದ ಎಲ್ಲಾ ಚುನಾಯಿತ ಸಂಸತ್ ಸದಸ್ಯರ ಮೇಲೆ (ಸಂಸದರು) ಡಿಜಿಟಲ್ ಕಣ್ಗಾವಲಿನ ಮೂಲಕ ನಿಗಾ ಇರಿಸಲು ಕೋರಿ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಡಾ.ಸುರಿಂದರ್ ನಾಥ್ ಕುಂದ್ರಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ].

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.

"ಸಂಸದರ ಮೇಲೆ ಡಿಜಿಟಲ್ ನಿಗಾ ಇರಿಸಬೇಕು ಮತ್ತು ಈ ಕುರಿತ ನೀತಿ ನಿರ್ಧಾರವನ್ನು ಬಹುಮತದ ಮೂಲಕ ನಿರ್ಧರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ... ಈ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ... ಅರ್ಜಿದಾರರು ಪ್ರಕರಣ ಮುಂದುವರಿಸಿದರೆ ಈ ನ್ಯಾಯಾಲಯವು ದಂಡ ವಿಧಿಸುತ್ತದೆ ಎಂಬ ಅಂಶವನ್ನು ನಾವು ಅರ್ಜಿದಾರರ ಗಮನಕ್ಕೆ ತರುತ್ತೇವೆ. ಆದಾಗ್ಯೂ, ಭವಿಷ್ಯದಲ್ಲಿ ಇಂತಹ ಯಾವುದೇ ಮನವಿಯನ್ನು ಸಲ್ಲಿಸಬಾರದು ಎಂಬ ಎಚ್ಚರಿಕೆಯೊಂದಿಗೆ ನಾವು ದಂಡ ವಿಧಿಸುವುದರಿಂದ ದೂರವಿರಲಿದ್ದೇವೆ" ಎಂದು ಪೀಠ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ಇಂದಿನ ವಿಚಾರಣೆಯ ಸಮಯದಲ್ಲಿ, ಸಂಸದರು ಖಾಸಗಿತನದ ಮೂಲಭೂತ ಹಕ್ಕನ್ನು ಹೊಂದಿರುವ ಎಲ್ಲಾ ಚುನಾಯಿತ ಸಂಸದರ ಮೇಲೆ ನ್ಯಾಯಾಲಯವು ಡಿಜಿಟಲ್ ನಿಗಾ ಇರಿಸಲು ಸಾಧ್ಯವಿಲ್ಲ ಎಂದು ಸಿಜೆಐ ಹೇಳಿದರು.

"ಕಾನೂನಿನಿಂದ ಪಲಾಯನ ಮಾಡುವಂತಹ ಶಿಕ್ಷೆಗೊಳಗಾದ ಅಪರಾಧಿಗಳ ಮೇಲೆ ಮಾತ್ರ ಇಂತಹ ನಿಗಾ ಇರಿಸಲಾಗುತ್ತದೆ ... ನೀವು ವಾದಿಸಿದರೆ, ನಾವು 5 ಲಕ್ಷ ರೂ.ಗಳ ವೆಚ್ಚವನ್ನು (ದಂಡ) ವಿಧಿಸುತ್ತೇವೆ, ಅದನ್ನು ಭೂ ಕಂದಾಯವಾಗಿ ವಸೂಲಿ ಮಾಡಲಾಗುತ್ತದೆ. ಇದು ಸಾರ್ವಜನಿಕ ಸಮಯ, ನಮ್ಮ ಅಹಂಗೆ ಇಲ್ಲಿ ಸ್ಥಳವಿಲ್ಲ" ಎಂದು ಅವರು ಹೇಳಿದರು.

ಆದರೆ, ಅರ್ಜಿದಾರರ ಪರ ವಕೀಲರು ವಾದಿಸಲು ಮುಂದಾದರು, "ಈ ಎಲ್ಲಾ ಸಂಸದರು ಜನಪ್ರತಿನಿಧಿ ಕಾಯ್ದೆಯಡಿ ಆಯ್ಕೆಯಾದ ನಂತರ ಆರಸರಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅವರು ಸಾರ್ವಜನಿಕ ಸೇವಕರು." ಎಂದರು.

ಈ ವಾದವನ್ನು ತಿರಸ್ಕರಿಸಿದ ಸಿಜೆಐ, "ನೀವು ಎಲ್ಲಾ ಸಂಸದರ ವಿರುದ್ಧ ಈ ಆರೋಪ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕಾನೂನನ್ನು ಹೇಗೆ ಮಾಡುತ್ತಾರೆ? ಚುನಾಯಿತ ಸಂಸದರು ಭಾಗವಹಿಸಿದ ನಂತರ ಎಲ್ಲಾ ಕಾನೂನುಗಳನ್ನು ಸಂಸತ್ತು ಅಂಗೀಕರಿಸುತ್ತದೆ. ನಾಗರಿಕರಾಗಿ, ನಾವು ಕಾನೂನನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗೆ ಮುಂದುವರೆದರೆ, ಜನರು ನಮಗೆ ನ್ಯಾಯಾಧೀಶರ ಅಗತ್ಯವಿಲ್ಲ ಎಂದು ಹೇಳುತ್ತಾರೆ... ನಾವು ಬೀದಿಗಳಲ್ಲಿ ನ್ಯಾಯ ನಿರ್ಧರಿಸಿಕೊಳ್ಳುತ್ತೇವೆ, ಕಳ್ಳತನ ಮಾಡಿದವರ ಕೊಲ್ಲುತ್ತೇವೆ ಎನ್ನುತ್ತಾರೆ. ಇದೆಲ್ಲ ಸಂಭವಿಸಬೇಕೆಂದು ನಾವು ಬಯಸುತ್ತೇವೆಯೇ?" ಎಂದರು.

ಸಂಸದರ ಮೇಲೆ ಸಿಸಿಟಿವಿಯಿಂದ ದಿನದ 24 ಗಂಟೆಯೂ ನಿಗಾ ಇರಿಸಬೇಕು. ನಾಗರಿಕರು ತಮ್ಮ ಫೋನ್‌ಗಳಲ್ಲಿ ಈ ವಿಡಿಯೋಗಳನ್ನು ನೋಡಬೇಕು ಎಂದು ವಕೀಲರು ವಾದಿಸಿದರು.

"ವೈಯಕ್ತಿಕ ಕುಟುಂಬ ಸಮಯವನ್ನು ಹೊಂದಿರುವ ಸಂಸದರಿಗೆ ಚಿಪ್ಸ್ ಹಾಕಬೇಕೆಂದು ನೀವು ಬಯಸುತ್ತೀರಾ... ನೀವು ಏನು ವಾದಿಸುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ?" ಎಂದು ಸಿಜೆಐ ಅಸಮಧಾನ ಸೂಚಿಸಿದರು. ಅಂತಿಮವಾಗಿ ದಂಡ ವಿದಿಸುವ ಎಚ್ಚರಿಕೆಯೊಂದಿಗೆ ಅರ್ಜಿ ವಜಾಗೊಳಿಸಲಾಯಿತು.

Related Stories

No stories found.
Kannada Bar & Bench
kannada.barandbench.com