ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ: ನ್ಯಾ. ಓಕಾ ವಿಷಾದ

'́́ಬಾರ್ ಅಂಡ್ ಬೆಂಚ್' ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ಅವರು ನೀಡಿರುವ ಸಂದರ್ಶನದ ಭಾಗ 2ರ ಆಯ್ದ ಭಾಗಗಳ ಸಂಗ್ರಹ ರೂಪ ಇದು.
Justice Abhay Oka
Justice Abhay Oka
Published on

ಸಂವಿಧಾನದ 19(1) (ಎ) ಅಡಿ ದೊರೆತಿರುವ ವಾಕ್‌ ಸ್ವಾತಂತ್ರ್ಯ ಮಹತ್ವದ ಮೌಲಿಕ ಹಕ್ಕು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎಸ್‌ ಓಕಾ ಅವರು ಸಂವಿಧಾನದ 19 (2) ಅಡಿಯಲ್ಲಿ ಹೇಳಿರುವ ನಿರ್ಬಂಧಗಳನ್ನು ಹೊರತುಪಡಿಸಿ ಇನ್ನಾವುದೇ ನಿರ್ಬಂಧವನ್ನು ಅನ್ವಯಿಸಬಾರದು, ಆ ಮೂಲಕ 19(1)(ಎ)  ವಿಧಿಯನ್ನು ಎತ್ತಿಹಿಡಿಯಬೇಕು ಎಂದಿದ್ದಾರೆ.

'́́ಬಾರ್ ಅಂಡ್ ಬೆಂಚ್' ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ಅವರು ನೀಡಿರುವ ಸಂದರ್ಶನದ ಎರಡನೇ ಭಾಗದ ಪ್ರಮುಖ ಅಂಶಗಳನ್ನು ಸಂಗ್ರಹ ರೂಪದಲ್ಲಿ ಇಲ್ಲಿ ನೀಡಲಾಗಿದ್ದು ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಕಾಯ್ದುಕೊಳ್ಳಬೇಕಾದ ಆರೋಗ್ಯಕರ ಅಂತರ, ಪೊಲೀಸ್‌ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಇರುವ ತರಬೇತಿಯ ಕೊರತೆ, ಸಮಾಜದ ಕೆಲ ಲೋಪಗಳ ಕುರಿತಂತೆಯೂ ಮಾತನಾಡಿದ್ದಾರೆ.

ಭಾವನೆಗಳಿಗೆ ಧಕ್ಕೆ ಒದಗಿದೆ ಎಂಬಂತಹ ಅಸ್ಪಷ್ಟ ಮತ್ತು ವೈಯಕ್ತಿಕ ಮಾನದಂಡಗಳನ್ನು ಆಧರಿಸಿ ಭಾಷಣಗಳನ್ನು ಅಪರಾಧ ಎಂಬುದಾಗಿ ಪರಿಗಣಿಸಬಾರದು ಎಂದ ಅವರು ಈ ಬಗ್ಗೆ ನಿರ್ಧಾರಕ್ಕೆ ಬರಲು ಕಾನೂನು ಪರೀಕ್ಷೆಯನ್ನಷ್ಟೇ ಅನ್ವಯಿಸಬೇಕು ಎಂದಿದ್ದಾರೆ.

ವಾಕ್‌ ಸ್ವಾತಂತ್ರ್ಯಕ್ಕೆ ವಿಧಿಸಲಾಗುತ್ತಿರುವ ನಿರ್ಬಂಧ ಪ್ರಶ್ನಿಸಿ ನಾಗರಿಕರು ಹೂಡುತ್ತಿರುವ ದಾವೆಗಳ ಸಂಖ್ಯೆ ಹೆಚ್ಷಚಾಗುತ್ತಿದ್ದು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಬೇರೆಯವರಿಗೆಮಾತನಾಡುವ ಹಕ್ಕಿದೆ ಹಾಗೂ ಉಳಿದವರು ಹೇಳಿದ್ದನ್ನು ವಿವಾದಿಸುವ ಹಕ್ಕು ಅವರಿಗೆ ಇದೆ ಎಂಬುದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಎರಡರ ನಡುವಿನ ಅತಿಯಾದ ಸಾಮೀಪ್ಯ ನ್ಯಾಯಾಂಗ ನಿಷ್ಪಕ್ಷಪಾತವಾಗಿರಬೇಕು ಎಂಬ ಸಾಂವಿಧಾನಿಕ ಆದೇಶವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.

ವಾಕ್‌ ಸ್ವಾತಂತ್ರ್ಯದ ಹಕ್ಕುಗಳ ಕುರಿತು ಮಾತನಾಡಿದ ಅವರು ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಈ ಬಗ್ಗೆ ಅರಿವು ಇಲ್ಲ. ಇಂತಹ ಹಕ್ಕುಗಳ ಬಲವರ್ಧನೆಗಾಗಿ ಅವರಿಗೆ ನಿರಂತರ ಮತ್ತು ಗಂಭೀರ ತರಬೇತಿ ನೀಡಬೇಕಿದೆ ಎಂದು ಹೇಳಿದ್ದಾರೆ.

Also Read
ನ್ಯಾ. ಪಂಚೋಲಿ ಪದೋನ್ನತಿ ವಿವಾದ: ನ್ಯಾ. ನಾಗರತ್ನ ಅವರ ಭಿನ್ನಾಭಿಪ್ರಾಯ ಬಹಿರಂಗಗೊಳಿಸಬೇಕಿತ್ತು ಎಂದ ನ್ಯಾ. ಓಕಾ

ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳ ನೇಮಕವಾಗದಿರುವ ಬಗ್ಗೆ ಮಾತನಾಡಿರುವ ಅವರು ಕೊಲಿಜಿಯಂ ತಾನು ಪರಿಗಣಿಸಬೇಕಿದ್ದ ಹೈಕೋರ್ಟ್‌ ಮಹಿಳಾ ನ್ಯಾಯಾಮೂರ್ತಿಗಳ ಪ್ರಕರಣಗಳನ್ನು ಪರಿಗಣಿಸಿದೆಯೇ ಎಂಬುದು ಮುಖ್ಯವಾಗಿದೆ. ಅವುಗಳನ್ನು ಪರಿಗಣಿಸಿ ಇನ್ನೂ ಉತ್ತಮ ಕಾರಣಗಳಿಗಾಗಿ ಬೇರೆಯವರ ಹೆಸರನ್ನು ಶಿಫಾರಸ್ಸು ಮಾಡಿದ್ದರೆ ಅದು ಸಂಪೂರ್ಣ ಸರಿ ಎನಿಸಿಕೊಳ್ಳುತ್ತದೆ. ಆದರೆ ಮಹಿಳಾ ಅಭ್ಯರ್ಥಿಗಳ ಪ್ರಕರಣಗಳನ್ನು ಪರಿಣಗಿಸಲಾಗಿದೆಯೇ ಎಂಬುದು ನಿಜವಾದ ಪ್ರಶ್ನೆ. ಅವುಗಳನ್ನು ಪರಿಗಣಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಧೀಶರ ನಿವೃತ್ತ ಸಾರ್ವಜನಿಕ ಜೀವನದ ಬಗ್ಗೆ ತಮ್ಮ ಅನ್ನಿಸಿಕೆ ಹಂಚಿಕೊಂಡಿರುವ ಅವರು ನ್ಯಾಯಾಧೀಶರು ಅಧಿಕಾರದಿಂದ ಕೆಳಗಿಳಿದ ಬಳಿಕ ಚುನಾವಣಾ ರಾಜಕೀಯಕ್ಕೆ ಇಳಿಯಬಾರದು…ನ್ಯಾಯಾಧೀಶ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ನೀವು ಆತನ ವಿರುದ್ಧ ಏನನ್ನೂ ಹೇಳಲಾಗದು… ನೀವು ನ್ಯಾಯಾಧೀಶರನ್ನು ಟೀಕಿಸುತ್ತಿರುವುದಿಲ್ಲ ಬದಲಿಗೆ ಅವರ ತೀರ್ಪುಗಳನ್ನು ಟೀಕಿಸುತ್ತಿರುತ್ತೀರಿ ಎಂದು ಹೇಳಿದ್ದಾರೆ.

ಸಂದರ್ಶನದ ಮೊದಲ ಭಾಗದ ಸಂಗ್ರಹ ರೂಪ:

Also Read
ನನ್ನ ತಂದೆ ಎಂದಿಗೂ ಆರ್‌ಎಸ್‌ಎಸ್‌ ಭಾಗವಾಗಿರಲಿಲ್ಲ: ನ್ಯಾ. ಓಕಾ
Kannada Bar & Bench
kannada.barandbench.com