ನಿನ್ನೆಯಷ್ಟೇ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿಯಾಗಿ ಮರುಆಯ್ಕೆಯಾದ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಅವರು ಕೊಚ್ಚಿಯಲ್ಲಿ ಕಾನೂನು ಸಂಸ್ಥೆ ಆರಂಭಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ನಾಯಕ ಪಿ ಜೆ ಜಾರ್ಜ್ ಪುತ್ರ ಶಾನ್ ಜಾರ್ಜ್ ಮತ್ತು ರಾಜ್ಯ ನಿವೃತ್ತ ಚುನಾವಣಾ ಆಯುಕ್ತರೊಬ್ಬರ ಪುತ್ರ ನಿನು ಮೋಹನ್‌ದಾಸ್ ಅವರೊಡಗೂಡಿ ಸಂಸ್ಥೆ ಆರಂಭಿಸಿದ್ದಾರೆ ಬಿನೀಶ್. ಈ ಮೂವರೂ ಸಹಪಾಠಿಗಳು ಕೂಡ.
ಬೆಂಗಳೂರು ಡ್ರಗ್ಸ್ ಜಾಲ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ ವರ್ಷ ಎನ್‌ಸಿಬಿ ಬಿನೀಶ್ ಅವರನ್ನು ಬಂಧಿಸಿತ್ತು. ಅವರ ಮನೆ ಮೇಲೆ ಇ ಡಿ ದಾಳಿ ನಡೆದಿತ್ತು. ನಂತರ ಅವರ ತಂದೆ ಕೊಡಿಯೇರಿ ಬಾಲಕೃಷ್ಣನ್ ಪಕ್ಷದ ರಾಜ್ಯ ಮುಖ್ಯಸ್ಥ ಸ್ಥಾನ ತೊರೆದಿದ್ದರು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಬಿನೀಶ್ ಅವರಿಗೆ ಜಾಮೀನು ನೀಡಿತ್ತು. ಇದಾದ ಕೆಲ ತಿಂಗಳಿನಲ್ಲೇ ಬಾಲಕೃಷ್ಣನ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ.
ವಕೀಲ ಅರವಿಂದಾಕ್ಷನ್ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂಬ ಮಾಹಿತಿಯನ್ನು ಶಾನ್ ಜಾರ್ಜ್ ಅವರು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿದರು. ಕೋವಿಡ್ ಸಾಂಕ್ರಾಮಿಕ, ಬಿನೀಶ್ ಅವರ ಬಂಧನದಿಂದಾಗಿ ಸಂಸ್ಥೆಗೆ ಚಾಲನೆ ನೀಡುವುದು ತಡವಾಯಿತು ಎಂದು ಅವರು ವಿವರಿಸಿದರು.