ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ತಾವು ಸಲ್ಲಿಸಿದ್ದ ಮನವಿಯನ್ನು ಪರಿಸರ ಹೋರಾಟಗಾರ, ಶಿಕ್ಷಣ ತಜ್ಞ ಹಾಗೂ ಚಿಂತಕ ಸೋನಮ್ ವಾಂಗ್‌ಚುಕ್ ಮಂಗಳವಾರ ದೆಹಲಿ ಹೈಕೋರ್ಟ್‌ನಿಂದ ಹಿಂಪಡೆದಿದ್ದಾರೆ [ಲೇಹ್ ಅಪೆಕ್ಸ್ ಬಾಡಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಲಡಾಖ್ ಪರ ಹೋರಾಟ ನಡೆಸುತ್ತಿರುವವರ ಜೊತೆ ಮಾತುಕತೆ ಪುನರಾರಂಭಿಸುವುದಾಗಿ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದ ನಂತರ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಒಂದು ದಿನದ ಬಳಿಕ ವಾಂಗ್‌ಚುಕ್ ನೇತೃತ್ವದ ಅಪೆಕ್ಸ್ ಬಾಡಿ ಲೇಹ್ ಸಂಘಟನೆ ಅರ್ಜಿ ಹಿಂಪಡೆದಿದೆ.
ವಾಂಗ್ಚುಕ್ ಅವರು ಪ್ರತಿಭಟನೆ ಹಿಂಡೆದಿರುವುದರಿಂದ ಅರ್ಜಿ ವಿಚಾರಣಾರ್ಹವಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮತ್ತು ನ್ಯಾಯಮೂರ್ತಿ ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು. ಈ ಬೆಳವಣಿಗೆಯನ್ನು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ದೃಢಪಡಿಸಿದರು.
ಅಕ್ಟೋಬರ್ 8 ರಿಂದ ಅಕ್ಟೋಬರ್ 23ರ ನಡುವೆ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕಳೆದ ವಿಚಾರಣೆ ವೇಳೆ ಹೈಕೋರ್ಟ್, ಪೊಲೀಸರ ಪ್ರತಿಕ್ರಿಯೆ ಕೇಳಿತ್ತು.
ಜಮ್ಮು ಕಾಶ್ಮೀರವನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದಾಗ ಪ್ರತ್ಯೇಕಗೊಂಡ ಲಡಾಖ್ ಪ್ರದೇಶವನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ವಾಂಗ್‌ಚುಕ್ ಹಾಗೂ ಅವರ ಬೆಂಬಲಿಗರು ಈಚೆಗೆ ಲೇಹ್‌ನಿಂದ ದೆಹಲಿಯವರೆಗೆ ಪಾದಯಾತ್ರೆ ನಡೆಸಿದ್ದರು. ಪಾದಯಾತ್ರೆ ಬಳಿಕ ಜಂತರ್ ಮಂತರ್‌ನಲ್ಲಿ ದೆಹಲಿ ತಲುಪುತ್ತಿದ್ದಂತೆ ಸೆಪ್ಟೆಂಬರ್ 30 ರಂದು ಸಿಂಘು ಗಡಿಯಲ್ಲಿ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಇದೆಲ್ಲದರ ನಡುವೆ ಪಾದಯಾತ್ರೆ ಬಳಿಕ ಪ್ರತಿಭಟನೆ ನಡೆಸಲು ಅವರು ಕೋರಿದ್ದ ಅನುಮತಿಯನ್ನು ದೆಹಲಿ ಪೊಲೀಸರು ನಿರಾಕರಿಸಿದ್ದರು.
ಸ್ಥಳೀಯರ ಹಕ್ಕು ಮತ್ತು ಅಸ್ಮಿತೆಯನ್ನು ಗುರುತಿಸಿ ಸಂರಕ್ಷಿಸುವುದಕ್ಕಾಗಿ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾಯತ್ತ ಆಡಳಿತ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂವಿಧಾನದ ಆರನೇ ಪರಿಚ್ಛೇದ ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ, ಈಶಾನ್ಯ ಭಾರತದ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಮಾತ್ರ ಈ ಪರಿಚ್ಛೇದ ಅನ್ವಯವಾಗುತ್ತಿದೆ.
ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿರುವುದು ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ತನ್ನ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸಂಘಟನೆ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಇಡೀ ಪ್ರತಿಭಟನೆಯನ್ನೇ ಸಾರಾಸಗಟಾಗಿ ನಿರಾಕರಿಸುವ ಬದಲು ಬೇರೊಂದು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಬಹುದಿತ್ತು ಎಂದು ಅದು ಹೇಳಿತ್ತು.