ಕೊರೊನಾ ಸೋಂಕಿತರು ಧಾರ್ಮಿಕ ಸ್ಥಳ, ರೆಸ್ಟೋರೆಂಟ್‌ಗಳಿಗೆ ತೆರಳಲು ಅವಕಾಶ! ಕೇಂದ್ರಕ್ಕೆ ಹೈಕೋರ್ಟ್ ತರಾಟೆ

ಸಾಮಾಜಿಕ ಅಂತರ ಕಾಪಾಡದವರು ಮತ್ತು ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ₹200 ದಂಡವನ್ನು ₹1,000ಕ್ಕೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ ನ ವಿಭಾಗೀಯ ಪೀಠಕ್ಕೆ ತಿಳಿಸಿದೆ.
ಕೊರೊನಾ ಸೋಂಕಿತರು ಧಾರ್ಮಿಕ ಸ್ಥಳ, ರೆಸ್ಟೋರೆಂಟ್‌ಗಳಿಗೆ ತೆರಳಲು ಅವಕಾಶ! ಕೇಂದ್ರಕ್ಕೆ ಹೈಕೋರ್ಟ್ ತರಾಟೆ
COVID-19 social distancing

ಕೋವಿಡ್ ಸಾಂಕ್ರಾಮಿಕತೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಕೋವಿಡ್ ತಡೆಯಲು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ರಾಷ್ಟ್ರೀಯ ಕೋವಿಡ್ ನಿರ್ವಹಣಾ ನಿರ್ದೇಶನ ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅಶೋಕ್ ಎಸ್ ಕಿಣಗಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ (ಅ.8) ನಿಗದಿಪಡಿಸಿದೆ.

“ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಪ್ರತಿದಿನ 9,000 ದಿಂದ 10,000 ಪ್ರಕರಣಗಳು ವರದಿಯಾಗುತ್ತಿವೆ… ನ್ಯಾಯಾಲಯದ ಆದೇಶಗಳನ್ನು ಅನುಸರಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಸಾಂಕ್ರಾಮಿಕತೆಯ ಆರಂಭದ ದಿನಗಳಲ್ಲಿ ಈ ನ್ಯಾಯಾಲಯವು ಉದಾರ ಧೋರಣೆ ಅನುಸರಿಸಿತ್ತು. ಆದರೆ, ಈ ಪ್ರಕರಣದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ವಿಷಯದಲ್ಲಿ ವೈಫಲ್ಯತೆ ಕಂಡುಬಂದಿದೆ,” ಎಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.

ಸಾಮಾಜಿಕ ಅಂತರ ಕಾಪಾಡುವ ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ತೆರನಾದ ಗಂಭೀರ ಕ್ರಮಕೈಗೊಳ್ಳಲಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಹೇಳಿದರು.

ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‌ಒಪಿ) ನಿರ್ದೇಶನದ ಪ್ರಕಾರ ನಡೆದುಕೊಳ್ಳದಿರುವವರ ವಿರುದ್ಧ ದಂಡ ವಿಧಿಸುವ ಮೂಲಕ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ದಂಡವನ್ನು ₹200ದಿಂದ ₹1,000ಕ್ಕೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ದಂಡ ಹೆಚ್ಚಿಸಿದರು ಜನರು ಮಾಸ್ಕ್ ಧರಿಸದೇ ಜನರು ಓಡಾಡುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದನ್ನು ವಿಸ್ತರಿಸಿದ ನ್ಯಾಯಪೀಠವು ಹೀಗೆ ಹೇಳಿತು:

“ಪ್ರಜೆಯಾಗಿ ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತಿದ್ದೇನೆ- ಕಬ್ಬನ್ ಪಾರ್ಕ್ ನಲ್ಲಿ ಯಾರ ದೇಹದ ತಾಪಮಾನವನ್ನೂ ಪರಿಶೀಲಿಸುತ್ತಿಲ್ಲ. ಯಾರು ಬೇಕಾದರೂ ಪ್ರವೇಶಿಸಬಹುದಾಗಿದೆ.”

ಕೇಂದ್ರ ಸರ್ಕಾರ ಪ್ರತಿನಿಧಿಸುತ್ತಿರುವ ವಕೀಲರತ್ತ ತಿರುಗಿದ ನ್ಯಾಯಪೀಠವು ಹೀಗೆ ಹೇಳಿತು:

“ಕೊರೊನಾ ಸೋಂಕಿತರು ಧಾರ್ಮಿಕ ಸ್ಥಳ, ರೆಸ್ಟೋರೆಂಟ್ ಗಳಿಗೆ ತೆರಳಬಹುದು ಎಂದು ನಿಮ್ಮ ಎಸ್‌ಒಪಿಯು ಸೂಚಿಸುತ್ತಿದೆ. ಅದರ ಬಗ್ಗೆ ನೀವು ಸ್ಪಷ್ಟನೆ ನೀಡುತ್ತಿಲ್ಲ.”
ಕರ್ನಾಟಕ ಹೈಕೋರ್ಟ್‌
Also Read
ಕೋವಿಡ್: ಕೇಂದ್ರದ ಅಸಮರ್ಪಕ ನಿರ್ವಹಣೆಯ ತನಿಖೆಗೆ ವಿಚಾರಣಾ ಆಯೋಗ ರಚಿಸಲು ಕೋರಿದ್ದ ಪಿಐಎಲ್‌ ತಿರಸ್ಕರಿಸಿದ 'ಸುಪ್ರೀಂ'

ಅರ್ಜಿದಾರರ ಪರ ವಾದಿಸಿದ ವಕೀಲ ಜಿ ಆರ್ ಮೋಹನ್ ಅವರು ಮೈಸೂರು ದಸರಾ ಮೆರವಣಿಗೆಯಲ್ಲಿ ಸುಮಾರು 3,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕೋವಿಡ್ ಸಾಂಕ್ರಾಮಿಕತೆ ತಡೆಯಲು ಅರಿವು ಮೂಡಿಸುವ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಡುವುದು ಒಳಿತು ಎಂದು ಸಲಹೆ ನೀಡಿದರು.

“ಸೋಂಕು ಹರಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಪ್ರಕರಣ ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ನ್ಯಾಯಪೀಠ ಹೇಳಿತು.

Related Stories

No stories found.