ಕೋವಿಡ್: ಕೇಂದ್ರದ ಅಸಮರ್ಪಕ ನಿರ್ವಹಣೆಯ ತನಿಖೆಗೆ ವಿಚಾರಣಾ ಆಯೋಗ ರಚಿಸಲು ಕೋರಿದ್ದ ಪಿಐಎಲ್‌ ತಿರಸ್ಕರಿಸಿದ 'ಸುಪ್ರೀಂ'

ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲಾಗದು ಎಂದಿರುವ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ಅಜಯ್ ರಾಸ್ತೋಗಿ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆಗೆ ನಿರಾಕರಿಸಿದೆ.
Supreme Court
Supreme Court
Published on

ಕೋವಿಡ್ ಸಾಂಕ್ರಾಮಿಕತೆಯನ್ನು ಕೇಂದ್ರ ಸರ್ಕಾರವು ಅಸಮರ್ಪಕವಾಗಿ ನಿರ್ವಹಿಸಿರುವುದರ ಕುರಿತು ತನಿಖೆ ನಡೆಸಲು ವಿಚಾರಣಾ ಆಯೋಗ ರಚಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿತು.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ಅಜಯ್ ರಾಸ್ತೋಗಿ ಅವರಿದ್ದ ವಿಭಾಗೀಯ ಪೀಠವು ಅರ್ಜಿ ಕೋರಿಕೆಯನ್ನು ತಿರಸ್ಕರಿಸಿ, ಈ ಕುರಿತು ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಖಚಿತವಾಗಿ ಹೇಳಿತು.

ಕೋವಿಡ್ ಸಾಂಕ್ರಾಮಿಕತೆಯ ನಿರ್ವಹಣೆ ಮತ್ತು ಏಕಾಏಕಿ ಲಾಕ್ ಡೌನ್ ಘೋಷಿಸಿದ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಆರು ತಿಂಗಳ ಹಿಂದೆ ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ (ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ)” ಎಂದಿತು.

ವರ್ಷದ ಆರಂಭದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಪ್ರಸ್ತಾಪಿಸಿದ ಭೂಷಣ್ ಅವರು ಸಾಂಕ್ರಾಮಿಕತೆ ನಿರ್ವಹಿಸುತ್ತಿರುವ ಸರ್ಕಾರದ ಕ್ರಮ ಪ್ರಶ್ನಾರ್ಹ ಎಂದು ವಾದಿಸಿದರು. ಅದರೆ ನ್ಯಾಯಾಲಯವು ಅರ್ಜಿ ವಿಚಾರಣೆಗೆ ಸಮ್ಮತಿಸಲಿಲ್ಲ.

ಪಿಐಎಲ್‌ನಲ್ಲಿ ಕೇಳಲಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠವು ತೀರ್ಪು ಪ್ರಕಟಿಸಿದೆ ಎಂದು ನ್ಯಾಯಪೀಠ ಹೇಳಿತು.

Also Read
ಕೋವಿಡ್ ಜಾಗೃತಿ ಜಾಹೀರಾತು ಫಲಕಗಳಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್- ಸರ್ಕಾರಕ್ಕೆ ತರಾಟೆ

ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕತೆಯನ್ನು ಅಸಮರ್ಪಕವಾಗಿ ನಿರ್ವಹಿಸಿರುವುದರ ಕುರಿತು ವಿಚಾರಣಾ ಆಯೋಗದ ಮೂಲಕ ತನಿಖೆ ನಡೆಸುವಂತೆ ಕೋರಿ ಕಳೆದ ಜುಲೈನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕೇವಲ ನಾಲ್ಕು ಗಂಟೆಗಳ ಅವಕಾಶ ಕಲ್ಪಿಸಿ ಮೊದಲ ಅವಧಿಯ ಲಾಕ್‌ ಡೌನ್ ಘೋಷಣೆ ಮಾಡಲಾಗಿತ್ತು. “ತಜ್ಞರು ಅಥವಾ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸದೇ ಸ್ವೇಚ್ಛೆಯಿಂದ ಮತ್ತು ತರ್ಕಹೀನವಾಗಿ ನಿರ್ಧಾರ ಕೈಗೊಳ್ಳಲಾಗಿತ್ತು” ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಕೇಂದ್ರ ಸರ್ಕಾರದ ವಿಫಲತೆಯನ್ನು ಪತ್ತೆಹಚ್ಚಲು ನ್ಯಾಯಾಲಯವು ಆಯೋಗವನ್ನು ರಚಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

Kannada Bar & Bench
kannada.barandbench.com