ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎಚ್‌ಐಡಿಸಿಒ) ನೀಡಿದ್ದ ನಿವೇಶನವನ್ನು ಕಲ್ಕತ್ತಾ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಗಂಗೂಲಿ ಅವರೇ ಷರತ್ತುಗಳನ್ನು ವಿಧಿಸುವ ರೀತಿಯಲ್ಲಿ ಎಚ್‌ಐಡಿಸಿಒದ ನಿವೇಶನ ಹಂಚಿಕೆ ಪ್ರಕ್ರಿಯೆಯ ವರ್ತನೆ ಇದೆ ಎಂದು ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠ ಬಲವಾದ ಆಕ್ಷೇಪ ವ್ಯಕ್ತಪಡಿಸಿತು.
ಸರ್ಕಾರ ತನ್ನ ತನ್ನ ಆಸ್ತಿಯೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ನ್ಯಾಯಯುತವಾದ ಕಾರ್ಯವಿಧಾನವನ್ನು ಅನುಸರಿಸುವ ರೀತಿ ಇದಲ್ಲ. ಪ್ರಕರಣದಲ್ಲಿ ನಿಷ್ಕಪಟತೆಯನ್ನು ಪರೀಕ್ಷಿಸಲಾಗಿಲ್ಲ ಎನ್ನುವುದು ಕಂಡು ಬಂದಿದೆ. ಹೀಗಾಗಿ ಗಂಗೂಲಿ ಅವರು ವ್ಯವಸ್ಥೆಯೊಂದಿಗೆ ಆಟವಾಡಲು ಸಾಧ್ಯವಾಗಿದೆ. ಅದು ಕೂಡ ಇದು ಮೊದಲ ಬಾರಿಯೇನೂ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ಭೂಮಿಯು ಸರ್ಕಾರದ ಆಸ್ತಿಯಲ್ಲವೇನೋ, ಬದಲಿಗೆ ಸರ್ಕಾರದ ಪರವಾಗಿ ಖಾಸಗಿ ಸಂಸ್ಥೆಯೊಂದು ವ್ಯವಹರಿಸುತ್ತಿದೆಯೇನೋ ಎನ್ನುವಂತೆ ಕಾನೂನು ಪ್ರಕ್ರಿಯೆ ಪಾಲಿಸದೆ, ತನ್ನಿಷ್ಟದಂತೆ ವ್ಯವಹರಿಸಲು, ಕಣ್ಣುಮುಚ್ಚಿ ನಿವೇಶನ ಹಂಚಲು ನಿರ್ಧರಿಸಲಾಗಿದೆ ಎಂದು ಅದು ಟೀಕಿಸಿದೆ.
ಇದೇ ಸಂದರ್ಭದಲ್ಲಿ ಗಂಗೂಲಿ ಅವರ ಕ್ರಿಕೆಟ್ ಸಾಧನೆಗಳನ್ನು ಶ್ಲಾಘಿಸಿದ ನ್ಯಾಯಾಲಯ "ದೇಶ ಸದಾ ಕ್ರೀಡಾಪಟುಗಳ ವಿಶೇಷವಾಗಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವವರ ಪರವಾಗಿ ನಿಲ್ಲುತ್ತದೆ. ಸೌರವ್ ಗಂಗೂಲಿ ಕ್ರಿಕೆಟ್ ನಲ್ಲಿ ದೇಶಕ್ಕೆ ಗೌರವ ತಂದಿದ್ದಾರೆ ಎಂಬುದು ಸತ್ಯ. ಆದರೆ ಕಾನೂನಿನ ವಿಷಯಕ್ಕೆ ಬಂದಾಗ, ನಮ್ಮ ಸಾಂವಿಧಾನಿಕ ಚೌಕಟ್ಟಿನಂತೆ ಎಲ್ಲರೂ ಸಮಾನರು ಮತ್ತು ಯಾರೂ ವಿಶೇಷ ಎಂದು ಹೇಳಿಕೊಳ್ಳಲಾಗದು ”ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಸುಪ್ರೀಂಕೋರ್ಟ್ ಈ ಹಿಂದೆ ಪ್ರತಿವಾದಿಗಳ (ಗಂಗೂಲಿ) ಕೃತ್ಯವನ್ನು ಟೀಕಿಸಿ ನಿವೇಶನ ಹಂಚಿಕೆ ಮಾಡಿದ್ದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪ್ರಕರಣದಲ್ಲಿ ಗಂಗೂಲಿ ಅವರು ಇದಾಗಲೇ ಸರ್ಕಾರದಿಂದ ನೀಡಲಾಗಿದ್ದ ಭೂಮಿಯನ್ನು ಮರಳಿಸಿದ್ದರೂ ನ್ಯಾಯಾಲಯವು ಭೂಮಿಯ ಹಂಚಿಕೆಯ ಆದೇಶವನ್ನು ರದ್ದುಪಡಿಸಿತು. ಮನಸೋಇಚ್ಛೆಯಿಂದ ವರ್ತಿಸಿದ ಎಚ್‌ಐಡಿಸಿಒಗೆ ರೂ. 50 ಸಾವಿರ ದಂಡವನ್ನೂ, ಗಂಗೂಲಿ ಮತ್ತವರ ಪ್ರತಿಷ್ಠಾನಕ್ಕೆ ಕಾನೂನು ಅನುಸಾರ ನಡೆದುಕೊಳ್ಳದ ಕಾರಣಕ್ಕೆ ರೂ. 10 ಸಾವಿರ ದಂಡವನ್ನೂ ವಿಧಿಸಿತು.