

ಮಾಜಿ ಸಚಿವ ಬಿ ನಾಗೇಂದ್ರ ಅವರು ಹಲವು ಹಣ ದುರ್ಬಳಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಿಸಿದೆ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳ ನೆರವಿನಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ಟೆಂಡರ್ ಪ್ರಕ್ರಿಯೆ ತಿರುಚಿ ತನ್ನ ಇಚ್ಛೆಯ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ಅದರಿಂದ ಲಂಚ ಸ್ವೀಕರಿಸಿದ ಆರೋಪದ ಕುರಿತು ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ.
ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಬಂಧಿಸಿದರೆ ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಪಡದು ಅವರನ್ನು ಬಿಡುಗಡೆ ಮಾಡಬೇಕು. ಪ್ರಾಸಿಕ್ಯೂಷನ್ ಸಾಕ್ಷಿಯನ್ನು ನಾಗೇಂದ್ರ ಬೆದರಿಸಬಾರದು ಅಥವಾ ತಿರುಚಬಾರದು. ಇಂದಿನಿಂದ 15 ದಿನಗಳ ಒಳಗೆ ನಾಗೇಂದ್ರ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ತನಿಖೆಗೆ ಸಹಕರಿಸಬೇಕು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಪೂರ್ವಾನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು. ಸಿಬಿಐ ಅಂತಿಮ ವರದಿ ಸಲ್ಲಿಸುವವರೆಗೆ ಅಥವಾ ಮುಂದಿನ ಮೂರು ತಿಂಗಳು, ತಿಂಗಳ ಎರಡನೇ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 5ರ ನಡುವೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
“ವಾಲ್ಮೀಕಿ ನಿಗಮದ ಹಣವನ್ನು ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ವರ್ಗಾಯಿಸಲಾಗಿದ್ದು, ಅದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಲಾಗಿದೆ. ಸಿಬಿಐನ ಈ ವಾದವನ್ನು ಒಪ್ಪಿಕೊಳ್ಳುವುದಾದರೆ ಹಣ ವರ್ಗಾವಣೆಯ ಹೆಣಿಗೆ ಮತ್ತು ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುವ ಸೂಚನೆ ನೀಡುತ್ತಿದೆ. ಹೀಗಾದಲ್ಲಿ ಜಾರಿ ನಿರ್ದೇಶನಾಲಯವು ವಾಲ್ಮೀಕಿ ನಿಗಮದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಿಸಿರುವ ಪ್ರಕರಣದ ಕುರಿತು ಉತ್ತರಿಸಬೇಕಿದೆ. ಆದರೆ, ಆಕ್ಷೇಪಣೆ ಹೊರತುಪಡಿಸಿ, ಸಿಬಿಐ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ಕೆಜಿಟಿಟಿಐ ಟೆಂಡರ್ ಅನ್ನು ಸರ್ಕಾರದ ಪೋರ್ಟಲ್ ಮೂಲಕ ಕರೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ಮತ್ತು ಟೆಂಡರ್ ಅನುಷ್ಠಾನವಾಗಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಇ-ಆಡಳಿತ ಪರಿಶೀಲನೆಯ ಬಳಿಕ ಟೆಂಡರ್ ಹಣ ಬಿಡುಗಡೆ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ಏಕೆ ಮತ್ತೆ ತನಿಖೆ ನಡೆಸಬೇಕು ಎಂಬುದಕ್ಕೆ ಸಿಬಿಐ ಉತ್ತರಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
“ಸಿಬಿಐ ತನಿಖಾ ವ್ಯಾಪ್ತಿ ಮತ್ತು ವಿಭಿನ್ನವಾಗಿದ್ದು, ವಾಲ್ಮೀಕಿ ನಿಗಮದ ಹಣ ಮತ್ತು ಇತರೆ ಹಣ ಎಲ್ಲಿ ಹೋಗಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಯಾವ ರೀತಿಯಲ್ಲಿ ಅಪರಾಧ ಪ್ರಕ್ರಿಯೆ ನಡೆದಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆ ಪೂರಕ ದಾಖಲೆ ಒದಗಿಸಿ ಸಿಬಿಐ ಸಮರ್ಥಿಸಿಲ್ಲ. ತನಿಖೆಯ ವಿಧಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಕೂಡದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮೇಲ್ನೋಟಕ್ಕೆ ಪ್ರಕರಣ ಕಂಡರೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ. ಈ ನೆಲೆಯಲ್ಲಿ ಅರ್ಜಿದಾರ ನಾಗೇಂದ್ರ ಅವರು ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಕಠಿಣ ಷರತ್ತು ವಿಧಿಸಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.
ನಾಗೇಂದ್ರ ಪರವಾಗಿ ವಕೀಲ ಗೌತಮ್ ನೆಟ್ಟಾರ್, ಸಿಬಿಐ ಪರವಾಗಿ ಸರ್ಕಾರಿ ಅಭಿಯೋಜಕ ಬಾಲಜಿ ವಾದಿಸಿದರು.