

ಆನ್‌ಲೈನ್ - ಆಫ್‌ಲೈನ್ ಬೆಟ್ಟಿಂಗ್ ಆರೋಪದ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಇಂದು ಪ್ರಕಟಿಸಿದರು.
ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು, ಪಾಸ್‌ಪೋರ್ಟ್ ಅನ್ನು ಸಕ್ಷಮ ನ್ಯಾಯಾಲಯಕ್ಕೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಆಗಸ್ಟ್ 23ರಂದು ಬಂಧಿತರಾಗಿದ್ದ ವೀರೇಂದ್ರ ಪಪ್ಪಿ ವಿರುದ್ಧ ಅಕ್ಟೋಬರ್ 18ರಂದು ವಿಶೇಷ ನ್ಯಾಯಾಲಯಕ್ಕೆ ಇ ಡಿ ಆರೋಪ ಪಟ್ಟಿ ಸಲ್ಲಿಸಿತ್ತು. ಈಚೆಗೆ ಕನಕಪುರದ ಹಾರೋಹಳ್ಳಿಯಲ್ಲಿ ಬಾಕಿ ಇರುವ ಎಫ್‌ಐಆರ್ ಪ್ರೆಡಿಕೇಟ್ ಅಪರಾಧಕ್ಕೆ (ಅಕ್ರಮಗಳಿಕೆಗೆ ಕಾರಣವಾದ ಮೂಲ ಅಪರಾಧ) ಪೂರಕವಾಗಿದೆ ಎಂದು ಹೇಳಿದ್ದ ಕರ್ನಾಟಕ ಹೈಕೋರ್ಟ್ ಪಪ್ಪಿ ಅವರ ಬಂಧನ ಕಾನೂನುಬಾಹಿರ ಎಂದು ಹೇಳಲು ನಿರಾಕರಿಸಿತ್ತು.
ಆಗಸ್ಟ್ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟಾಕ್, ಮುಂಬೈ ಮತ್ತು ಗೋವಾ ಸೇರಿದಂತೆ ದೇಶದ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್, ಓಸಿಯನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಸಿಯನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್‌ಲೈನ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು. ಆ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿಯು ಹಲವು ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿತ್ತು. ವೀರೇಂದ್ರ ಪಪ್ಪಿ ಸಹೋದರ ಕೆ ಸಿ ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್9ಟೆಕ್ನಾಲಜೀಸ್ ಹೆಸರಿನ ಮೂರು ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಇ ಡಿ ಹೇಳಿತ್ತು.
ಶೋಧದ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ ನಾಲ್ಕು ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಫ್ತಿ ಮಾಡಲಾಗಿದೆ. ಇದರ ಜೊತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್‌ಗಳನ್ನು ಜಫ್ತಿ ಮಾಡಲಾಗಿದೆ. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.
ವೀರೇಂದ್ರ ಪಪ್ಪಿ ಪರವಾಗಿ ಹಿರಿಯ ವಕೀಲ ಕಿರಣ್ ಜವಳಿ ವಾದಿಸಿದ್ದರು. ವಕೀಲರಾದ ರಜತ್ ಮತ್ತು ಶಾಶ್ವತ್ ಎಸ್. ಪ್ರಕಾಶ್ ವಕಾಲತ್ತು ವಹಿಸಿದ್ದರು.