[ಅಕ್ರಮ ಅದಿರು ಮಾರಾಟ] ಮಾಜಿ ಸಚಿವ ಜನಾರ್ದನ ರೆಡ್ಡಿ, ಆಪ್ತ ಮೆಹಫೂಜ್‌ ಅಲಿ ಖಾನ್‌ಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ

ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.
G Janardhan Reddy
G Janardhan Reddy

ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ, ರಾಜ್ಯ ಸರ್ಕಾರಕ್ಕೆ ರಾಜಧನ ಖೋತಾ ಮತ್ತು ಇತರೆ ತೆರಿಗೆಗಳ ನಷ್ಟ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಕಾರ್ಯದರ್ಶಿ ಮತ್ತು ದೇವಿ ಎಂಟರ್‌ಪ್ರೈಸಸ್‌ ಪಾಲುದಾರ ಕೆ ಮೆಹಫೂಜ್‌ ಅಲಿ ಖಾನ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ (ಪೊಲೀಸ್‌ ವರಿಷ್ಠಾಧಿಕಾರಿ ವರ್ಸಸ್‌ ಜಿ ಜನಾರ್ದನ ರೆಡ್ಡಿ ಮತ್ತು ಇತರರು).

ಆರೋಪಿಗಳ ಜಾಮೀನು ಮನವಿ ವಿಚಾರಣೆ ನಡೆಸಿದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರೀತ್‌ ಜೆ ಈ ಆದೇಶ ಮಾಡಿದ್ದಾರೆ.

ಜಾಮೀನು ಮನವಿಯ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಓಬಳಾಪುರಂ ಮೈನಿಂಗ್‌ ಕಂಪೆನಿ ನಿರ್ದೇಶಕ ಮತ್ತು ಶ್ರೀ ಮಿನರಲ್ಸ್‌ನ ಪಾಲುದಾರ ಬಿ ವಿ ಶ್ರೀನಿವಾಸ ರೆಡ್ಡಿ ಭಾಗವಹಿಸಿದ್ದರು.

ಜನಾರ್ದನ ರೆಡ್ಡಿ ಮತ್ತು ಮೆಹಫೂಜ್‌ ಅಲಿ ಖಾನ್‌ ಅವರು ತಲಾ ರೂ. 50 ಸಾವಿರ ವೈಯಕ್ತಿಕ ಬಾಂಡ್‌ ಸಲ್ಲಿಸಬೇಕು. ಪ್ರತಿ ವಿಚಾರಣೆಯಲ್ಲಿ ಭಾಗಿಯಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯ ತಿರುಚಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ. ಅಲ್ಲದೇ ಆರೋಪಿಗಳಿಗೆ ತಲಾ 15 ಸಾವಿರ ರೂಪಾಯಿಯ ನಗದು ಭದ್ರತೆ ನೀಡಲು ಅನುಮತಿಸಿದೆ.

ಪ್ರಕರಣದ ಹಿನ್ನೆಲೆ: ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಬಿ ವಿ ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

2009-10ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದರು. ಆ ವೇಳೆ ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಶ್ರೀನಿವಾಸ ರೆಡ್ಡಿ ಸೇರಿದಂತೆ ಹಲವರ ಮನೆ, ಸಂಸ್ಥೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಡಿಜಿಟಲ್‌ ದತ್ತಾಂಶ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಪಾರ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಹೊರತೆಗೆದು, ಅದನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂಬ ಅಂಶ ಅದರಿಂದ ಬೆಳಕಿಗೆ ಬಂದಿತ್ತು.

Also Read
[ಅಕ್ರಮ ಅದಿರು ಮಾರಾಟ] ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಧನ ಮತ್ತಿತರ ಶುಲ್ಕ ಪಾವತಿಸದೆ ಆರೋಪಿಗಳು 1,25,419 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಎನ್‌ ಶೇಕ್‌ಸಾಬ್‌ ಮೈನ್ಸ್‌ ಮತ್ತು ತಿರುಮಲ ಕನ್ವೇಯರ್‌ ಸಿಸ್ಟಮ್ಸ್‌ಗೆ ಮಾರಾಟ ಮಾಡಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿತ್ತು. 1,25,419 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿನ ಪೈಕಿ 44,695 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗದಿಗನೂರ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಬಾಕಿ ಇರುವ 80,724 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಶ್ರೀ ಮಿನರಲ್ಸ್‌ ಮೂಲಕ ಆರ್‌ಬಿಎಸ್‌ಎಸ್‌ಎನ್‌ ಕಂಪೆನಿಗೆ 4,557 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಿದ್ದರ ಪೈಕಿ 1,069 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಅಥವಾ ಪರವಾನಗಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಲಾಗಿರಲಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ‌23,89,650 ರೂಪಾಯಿ ಆರ್ಥಿಕ ನಷ್ಟ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಮತ್ತು ಸಂಬಂಧಿತ ದಾಖಲೆಯನ್ನು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

2015ರಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 379, 409, 420, 468 ಮತ್ತು 471 ಜೊತೆಗೆ ಸೆಕ್ಷನ್‌ 120ಬಿ ಅಡಿ ದಾಖಲಾಗಿರುವ ಪ್ರಕರಣಗಳು ಖಾಸಗಿ ದೂರಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ವಿಚಾರಣೆಯ ಸಂದರ್ಭದಲ್ಲಿ ತನಿಖಾಧಿಕಾರಿ ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸುವಂತೆ ಅರ್ಜಿದಾರರು ಕೋರಿದ್ದಾರೆ. ತನಿಖಾಧಿಕಾರಿ ಸಲ್ಲಿಸಿರುವ ದಾಖಲೆಗಳಲ್ಲಿ ಮೇಲ್ನೋಟಕ್ಕೆ ವಾಸ್ತವ ಅಂಶಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಿತ್ತು.

Attachment
PDF
The Superintendent of Police Versus Janardhan Reddy.pdf
Preview

Related Stories

No stories found.
Kannada Bar & Bench
kannada.barandbench.com