ರಿಮ್ಯಾಂಡ್‌ ವಿಸ್ತರಣೆ, ಡಿಫಾಲ್ಟ್‌ ಜಾಮೀನು ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿ ವಿಶೇಷ ನ್ಯಾಯಾಲಯಕ್ಕಿದೆ: ಹೈಕೋರ್ಟ್‌

ರಾಜ್ಯ ಸರ್ಕಾರವು 2012ರ ಜುಲೈ 19ರಂದು ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು ವಿಶೇಷ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆದೇಶ ಮಾಡಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
Justices Alok Aradhe and Vijaykumar A. Patil
Justices Alok Aradhe and Vijaykumar A. Patil

ರಾಜ್ಯ ಸರ್ಕಾರದ ಆದೇಶದ ಅನ್ವಯ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಾಯಿದೆ ಸೆಕ್ಷನ್‌ 22(1)ರ ಅಡಿ ವಿಶೇಷ ನ್ಯಾಯಾಲಯವು ಆರೋಪಿಗಳ ರಿಮ್ಯಾಂಡ್‌ ವಿಸ್ತರಣೆ ಮತ್ತು ಡಿಫಾಲ್ಟ್‌ ಜಾಮೀನು ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶಿಸಿದ್ದು, ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಐವರು ಆರೋಪಿಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

2023ರ ಜನವರಿ 9ರಂದು ಮಾಡಿರುವ ರಿಮ್ಯಾಂಡ್‌/ವಶಕ್ಕೆ ಪಡೆಯುವ ಆದೇಶವು ವ್ಯಾಪ್ತಿ ಮೀರಿದೆ ಎಂದು ಆಕ್ಷೇಪಿಸಿ ಹಾಗೂ 2023ರ ಜನವರಿ 17ರಂದು ಮಾಡಿರುವ ಡಿಫಾಲ್ಟ್‌ ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ವಜಾ ಮಾಡಿರುವುದನ್ನು ಪ್ರಶ್ನಿಸಿ ನಿಷೇಧಿತ ಪಿಎಫ್‌ಐ ಸಂಘಟನೆಯ ಐವರು ಆರೋಪಿಗಳು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಎನ್‌ಐಎ ಕಾಯಿದೆ ಸೆಕ್ಷನ್‌ 22(1)ರ ಅಡಿ ರಾಜ್ಯ ಸರ್ಕಾರವು ಒಂದು ಅಥವಾ ಹೆಚ್ಚಿನ ವಿಶೇಷ ನ್ಯಾಯಾಲಯ ಸ್ಥಾಪಿಸಬಹುದಾಗಿದೆ. ರಾಜ್ಯ ಸರ್ಕಾರವು 2012ರ ಜುಲೈ 19ರಂದು ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು ವಿಶೇಷ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆದೇಶ ಮಾಡಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ತಾಹೀರ್‌ ಅವರು “ಹಾಲಿ ಪ್ರಕರಣವನ್ನು ರಾಜ್ಯ ಪೊಲೀಸರು ತನಿಖೆ ನಡೆಸಿದ್ದು, ಎನ್‌ಐಎ ಕಾಯಿದೆ ಸೆಕ್ಷನ್‌ 22(1)ರ ಅಡಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವ ಕುರಿತು ಅಧಿಸೂಚನೆ ಹೊರಡಿಸಲಾಗಿಲ್ಲ. ಎನ್‌ಐಎ ಕಾಯಿದೆ ಸೆಕ್ಷನ್‌ 22(3)ರ ಅಡಿ ಮಂಗಳೂರಿನ ಸತ್ರ ನ್ಯಾಯಾಲಯ ಮಾತ್ರ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿದೆ. ರಿಮ್ಯಾಂಡ್‌ ನೀಡುವುದು ಮತ್ತು ಡಿಫಾಲ್ಟ್‌ ಅರ್ಜಿಯನ್ನು ಮಂಗಳೂರು ನ್ಯಾಯಾಲಯ ಪರಿಗಣಿಸಬೇಕು. ಹೀಗಾಗಿ, ವಿಶೇಷ ನ್ಯಾಯಾಲಯದ ಆದೇಶವು ಕಾನೂನುಬಾಹಿರ. ಈ ನೆಲೆಯಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯು ಊರ್ಜಿತವಾಗುತ್ತದೆ. ಆರೋಪ ಪಟ್ಟಿ ಸಲ್ಲಿಸಿ, ಅದರ ಸಂಜ್ಞೇಯ ಪರಿಗಣಿಸದ ಮಾತ್ರಕ್ಕೆ ಆರೋಪಿಗಳು ಡಿಫಾಲ್ಟ್‌ ಜಾಮೀನು ಕೋರುವುದರಿಂದ ವಂಚಿತವಾಗುವುದಿಲ್ಲ” ಎಂದು ವಾದಿಸಿದ್ದರು

ವಿಶೇಷ ಸರ್ಕಾರಿ ಅಭಿಯೋಜಕ-2 ವಿ ಎಸ್‌ ಹೆಗ್ಡೆ ಅವರು “ಎನ್‌ಐಎ ಕಾಯಿದೆ ಸೆಕ್ಷನ್‌ 11(1)ರ ಅಡಿ ಬೆಂಗಳೂರಿನ 49ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ವಿಶೇಷ ನ್ಯಾಯಾಲಯವಾಗಿ ಕರ್ತವ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎನ್‌ಐಎ ತನಿಖೆ ನಡೆಸುವ ಪ್ರಕರಣಗಳನ್ನು ವಿಚಾರಣೆಯನ್ನು ಸದರಿ ನ್ಯಾಯಾಲಯ ನಡೆಸಲಿದೆ ಎಂದು ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್‌ 18ರಂದು ಮತ್ತೊಂದು ಅಧಿಸೂಚನೆ ಹೊರಡಿಸಿದೆ. 2012ರ ಜುಲೈ 19ರಂದು ರಾಜ್ಯ ಸರ್ಕಾರವು ಎನ್‌ಐಎ ಕಾಯಿದೆ ಅಡಿಯ ಪ್ರಕರಣ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸಲು ಆದೇಶ ಮಾಡಿದೆ. ಈ ಆದೇಶವನ್ನು ಸೆಕ್ಷನ್‌ 22(1)ರ ಅಡಿ ಆದೇಶ ಎಂದು ಭಾವಿಸಬೇಕು. ವಿಶೇಷ ನ್ಯಾಯಾಲಯ ಮಾತ್ರ ಈ ಪ್ರಕರಣಗಳ ವಿಚಾರಣೆ ನಡೆಸಲು ವ್ಯಾಪ್ತಿ ಹೊಂದಿವೆ. ಎನ್‌ಐಎ ಕಾಯಿದೆ ಸೆಕ್ಷನ್‌ 22(3)ರ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2022ರ ಅಕ್ಟೋಬರ್‌ 12ರಂದು ಮಂಗಳೂರಿನ ಪಂಣಬೂರು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅವರು ಆರೋಪಿಗಳಾದ ಮೊಹಮ್ಮದ್‌ ಬಿಲಾಲ್‌, ಮೊಹಮ್ಮದ್‌ ರಫೀಕ್‌, ಅಬ್ಬಾಸ್‌ ಕೀನ್ಯಾ, ಅಕ್ಬರ್‌ ಸಿದ್ದಿಕಿ ಮತ್ತು ಮೊಹಮ್ಮದ್‌ ರಫೀಕ್‌ ಅವರು ನಿಷೇಧಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಕಾರ್ಯಕರ್ತರಾಗಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ 13, 18(೧)(ಬಿ) ಹಾಗೂ ಐಪಿಎಸ್‌ ಸೆಕ್ಷನ್‌ಗಳಾದ 121, 121ಎ, 120ಬಿ, 153ಎ, 109 ಅಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಈ ಪ್ರಕರಣವನ್ನು 2022ರ ಡಿಸೆಂಬರ್‌ 28ರಂದು ಮ್ಯಾಜಿಸ್ಟ್ರೇಟ್‌ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು.

2023ರ ಜನವರಿ 9ರಂದು ವಿಶೇಷ ನ್ಯಾಯಾಲಯವು ಅರ್ಜಿದಾರರ ಕಸ್ಟಡಿಯನ್ನು 90ರಿಂದ 180 ದಿನಗಳಿಗೆ ವಿಸ್ತರಿಸಿತ್ತು. ಜನವರಿ 17ರಂದು ವಿಶೇಷ ನ್ಯಾಯಾಲಯವು ಆರೋಪಿಗಳು ಸಲ್ಲಿಸಿದ್ದ ಡೀಫಾಲ್ಟ್‌ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದು, ಸದರಿ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿರುವುದಾಗಿ ಆದೇಶಿಸಿತ್ತು. ಅರ್ಜಿ ಬಾಕಿ ಇರುವಾಗ ರಾಜ್ಯ ತನಿಖಾ ತಂಡವು ಏಪ್ರಿಲ್‌ 10ರಂದು ಆರೋಪ ಪಟ್ಟಿ ಸಲ್ಲಿಸಿದ್ದು, ಏಪ್ರಿಲ್‌ 17ರಂದು ನ್ಯಾಯಾಲಯವು ಸಂಜ್ಞೇ ಪರಿಗಣಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಈಗ ಹೈಕೋರ್ಟ್‌ ವಜಾ ಮಾಡಿದೆ.

Attachment
PDF
Mohammad Bilal and others Vs State of Karnataka and others.pdf
Preview

Related Stories

No stories found.
Kannada Bar & Bench
kannada.barandbench.com