ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಡಿ.2ಕ್ಕೆ ಖುದ್ದು ಹಾಜರಾಗಲು ಸಮನ್ಸ್‌ ಜಾರಿಗೊಳಿಸಿದ ವಿಶೇಷ ನ್ಯಾಯಾಲಯ

ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿ ಎಸ್‌ ಯಡಿಯೂರಪ್ಪ, ವೈ ಎಂ ಅರುಣ, ಎಂ ರುದ್ರೇಶ ಹಾಗೂ ಜಿ ಮರಿಸ್ವಾಮಿ ಅವರಿಗೆ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶರಾದ ಎಸ್‌ ಸುಜಾತಾ ಅವರು  ಸಮನ್ಸ್‌ ಜಾರಿಗೊಳಿಸಿದ್ದಾರೆ.
Bangalore City civil court and B S Yediyurappa
Bangalore City civil court and B S Yediyurappa
Published on

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬೆಂಗಳೂರಿನ ವಿಶೇಷ ಸತ್ರ ನ್ಯಾಯಾಲಯವು ಮಂಗಳವಾರ ಸಮನ್ಸ್‌ ಜಾರಿಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿ ಎಸ್‌ ಯಡಿಯೂರಪ್ಪ, ವೈ ಎಂ ಅರುಣ, ಎಂ ರುದ್ರೇಶ ಹಾಗೂ ಜಿ ಮರಿಸ್ವಾಮಿ ಅವರಿಗೆ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶರಾದ ಎಸ್‌ ಸುಜಾತಾ ಅವರು  ಸಮನ್ಸ್‌ ಜಾರಿಗೊಳಿಸಿ, ಡಿಸೆಂಬರ್ 2ಕ್ಕೆ ಖುದ್ದು ಹಾಜರಾಗಲು ನಿರ್ದೇಶಿಸಿದ್ದಾರೆ.

ವಿಶೇಷ ಪ್ರಾಸಿಕ್ಯೂಟರ್‌ ಅಶೋಕ್‌ ಎನ್.ನಾಯಕ್‌ ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆ ಆಗಬೇಕು ಎಂಬ ಹಿನ್ನೆಲೆಯಲ್ಲಿ ಸಮನ್ಸ್‌ ಜಾರಿಗೆ ಆದೇಶಿಸಿದರು.

“ಪೋಕ್ಸೊ ಅಪರಾಧಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಬೆಂಗಳೂರಿನ ಸತ್ರ ನ್ಯಾಯಾಲಯ ಹೊರಡಿಸಿರುವ ಸಮನ್ಸ್‌ ಜಾರಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಯಡಿಯೂರಪ್ಪ, ವೈ ಎಂ ಅರುಣ, ಎಂ ರುದ್ರೇಶ ಹಾಗೂ ಜಿ ಮರಿಸ್ವಾಮಿ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಹೈಕೋರ್ಟ್‌ ಈಚೆಗೆ ವಜಾಗೊಳಿಸಿತ್ತು.

“ಯಡಿಯೂರಪ್ಪ ಅವರ ಹಾಜರಿ ಅಗತ್ಯವಿಲ್ಲ ಎಂದಾದರೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ವಿನಾಯತಿ ಮನವಿಯನ್ನು ಪುರಸ್ಕರಿಸಬೇಕು. ಈ ಪೀಠ ಮತ್ತು ಸಕ್ಷಮ ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಭಾವಕ್ಕೆ ಒಳಗಾಗದೇ ತನ್ನ ಮುಂದಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣವನ್ನು ನಿರ್ಧರಿಸಬೇಕು” ಎಂದು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಪ್ರಕರಣದ ಹಿನ್ನೆಲೆ: ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ನ್ಯಾಯ ಕೊಡಿಸಿ ಎಂದು ಬೇಡಿ ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ತಾಯಿಯೊಬ್ಬರು (ಈಗ ಬದುಕಿಲ್ಲ) ಬಂದಿದ್ದರು.

Also Read
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹ: ಹೈಕೋರ್ಟ್‌

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು, ಸಂತ್ರಸ್ತೆಯಾದ 14 ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದಾಗಿ ತಿಳಿಸಿ ಆಕೆಯನ್ನು ತಮ್ಮ ಕೋಣೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿಯ ತಾಯಿಯು ಸದಾಶಿವನಗರದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 2024ರ ಫೆಬ್ರವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. 

ಇದನ್ನು ಆಧರಿಸಿ, ಪೊಲೀಸರು ಕಾನೂನಿನ ಚೌಕಟ್ಟಿನಲ್ಲಿ ಇದು ಅಪರಾಧ ಎನಿಸಿದೆ ಎಂದು ಐಪಿಸಿ ಸೆಕ್ಷನ್‌  354 ಎ, 204, 214 ಹಾಗೂ 37 ಮತ್ತು ಪೋಕ್ಸೊ-2012ರ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ) ಸೆಕ್ಷನ್‌ 8ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಿದ್ದರು.

Also Read
[ಪೋಕ್ಸೊ ಪ್ರಕರಣ] ಬಿಎಸ್‌ವೈ ವಿರುದ್ಧ ಸಂಜ್ಞೇ ಪರಿಗಣಿಸಿದ್ದ ಸಕ್ಷಮ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಪ್ರಕರಣ ಪರಿಗಣಿಸಿದ್ದ ವಿಶೇಷ ನ್ಯಾಯಾಲಯ, 2025ರ ಫೆಬ್ರವರಿ 28ರಂದು ಯಡಿಯೂರಪ್ಪ ಮತ್ತು ಇತರರಿಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿತ್ತು. ಆರೋಪಿಗಳು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್‌ ವಿಚಾರಣೆ ಮುಂದುವರಿಯಲು ಅನುವು ಮಾಡಿಕೊಟ್ಟಿತ್ತು.

ವಿಶೇಷ ನ್ಯಾಯಾಲಯವು ಪೋಕ್ಸೊ ಕಾಯಿದೆಯ ಸೆಕ್ಷನ್‌ 8 ಮತ್ತು ಐಪಿಸಿ ಸೆಕ್ಷನ್‌ 354ಎ, 204, 214 ಮತ್ತು 37ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಿದೆ.

Kannada Bar & Bench
kannada.barandbench.com