
ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದದ ಆರೋಪ ಪಟ್ಟಿಯ ಸಂಜ್ಞೇಯ ಪರಿಗಣಿಸಿ, ಸಮನ್ಸ್ ಜಾರಿ ಮಾಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವು ವಿವೇಚನಾರಹಿತ ಯಾಂತ್ರಿಕ ಆದೇಶವಾಗಿದೆ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ಆಕ್ಷೇಪಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸಲು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ನಡೆಸಿತು.
ಬಿಎಸ್‌ವೈ ಪ್ರತಿನಿಧಿಸಿರುವ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ಮತ್ತು ವೈದ್ಯಕೀಯ ವರದಿ ಸಲ್ಲಿಸದಿದ್ದರೂ ಮ್ಯಾಜಿಸ್ಟ್ರೇಟ್ ಅವರು ಆರೋಪ ಪಟ್ಟಿಯ ಸಂಜ್ಞೇ ಪರಿಗಣಿಸಿದ್ದಾರೆ. ಹಾಗಾದರೆ ಮ್ಯಾಜಿಸ್ಟ್ರೇಟ್ ಏನು ಪರಿಶೀಲಿಸಿದ್ದಾರೆ? ಈ ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ಸಂಜ್ಞೇ ಪರಿಗಣಿಸಿರುವ ಮತ್ತು ಅವರಿಗೆ ಸಮನ್ಸ್ ಜಾರಿ ಮಾಡಿರುವ ಆದೇಶವು ವಿವೇಚನೆ ಬಳಸದೇ ಹೊರಡಿಸಿರುವ ಯಾಂತ್ರಿಕ ಆದೇಶವಾಗಿರುವುದರಿಂದ ಅದನ್ನು ವಜಾ ಮಾಡಬೇಕು” ಎಂದು ಕೋರಿದರು.
“ಆರೋಪಿತ ಘಟನೆ ನಡೆದಿರುವುದು 2024ರ ಫೆಬ್ರವರಿ 2ರಂದು ಬೆಳಿಗ್ಗೆ 11ರಿಂದ 11.30ರ ನಡುವೆ. ಯಡಿಯೂರಪ್ಪ ಅವರ ಮನೆಯಲ್ಲಿಯೇ ಘಟನೆ ನಡೆದಿದೆ ಎಂದು ಹೇಳಲಾಗಿದೆ. ದೂರುದಾರರು ಯಡಿಯೂರಪ್ಪ ಅವರ ಮನೆಗೆ ಬಂದಾಗ ಸ್ಥಳದಲ್ಲಿ 20-25 ಮಂದಿ ಇದ್ದರು. ಅಷ್ಟು ಜನರ ಸಮ್ಮುಖದಲ್ಲಿ ಇಂತಹ ಕೃತ್ಯ ಎಸಗಲು ಸಾಧ್ಯವಿದೆಯೇ? ಮೇಲಾಗಿ ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ. ಈ ಮಧ್ಯೆ ಹಲವು ಬಾರಿ ದೂರುದಾರರು ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ. ದೂರುದಾರೆ ಮಮತಾ (ಸಾವನ್ನಪ್ಪಿದ್ದಾರೆ) ಕುಖ್ಯಾತ ಮಹಿಳೆ. ಆಕೆ ಬೇರೆ ಬೇರೆ ಪಕ್ಷಗಳ ನಾಯಕರು, ಸಂಬಂಧಿಗಳು, ಅಧಿಕಾರಿಗಳು ಸೇರಿದಂತೆ 53 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಭೂಮಿಯ ಮೇಲಿರುವ ಎಲ್ಲರ ಮೇಲೂ ದೂರು ದಾಖಲಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರು” ಎಂದು ಆಕ್ಷೇಪಿಸಿದರು.
“ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ ಮೇಲೂ ದೂರುದಾರೆ ಪ್ರಕರಣ ದಾಖಲಿಸಿದ್ದಾರೆ. ಆಕೆಯ ದೂರನ್ನು ಸಂಪೂರ್ಣ ಸತ್ಯ ಎಂಬುದಾಗಿ ನ್ಯಾಯಾಲಯ ಭಾವಿಸಬಾರದು. ಒಂದೂವರೆ ತಿಂಗಳ ನಂತರ ರಾಜಕಾರಣಿಯೊಬ್ಬರ ಮನೆಯಿಂದ ಬಂದು ದೂರು ದಾಖಲಿಸಿದ್ದಾರೆ. ಆ ದೂರಿನ ತನಿಖೆ ಮುಗಿಸಿರುವ ಪೊಲೀಸರು, ಬಿಎಸ್‌ವೈ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ವೈದ್ಯಕೀಯ ವರದಿ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ, ದೂರುದಾರೆ ಹೇಳಿಕೆ ಲಗತ್ತಿಸಿಲ್ಲ. ಇದೊಂದು ರೀತಿಯಲ್ಲಿ ಕುರುಡನೊಬ್ಬ ಕತ್ತಲೆ ಕೋಣೆಯಲ್ಲಿ ಇಲ್ಲದ ಕಪ್ಪು ಬೆಕ್ಕು ಹುಡುಕಿದಂತಾಗಿದೆ. ಪೂರಕ ದಾಖಲೆ ಸಲ್ಲಿಸದಿದ್ದರೂ ವಿಶೇಷ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿರುವುದು ಕಾನೂನು ಬಾಹಿರ” ಎಂದರು.
ಇದಕ್ಕೂ ಮುನ್ನ, ರಾಜ್ಯದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಪೋಕ್ಸೊ ಆರೋಪದಂಥ ಹೀನ ಕೃತ್ಯ ಎದುರಿಸುತ್ತಿರುವವರಿಗೆ ಮಧ್ಯಂತರ ರಕ್ಷಣೆ ನೀಡಬಾರದಿತ್ತು. ಬಿಎಸ್‌ವೈ ವಿರುದ್ಧ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಅಗತ್ಯವಿತ್ತು. ಆದರೆ, ನಿರೀಕ್ಷಣಾ ಜಾಮೀನು ಕೋರಿ ಅವರು ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ರಕ್ಷಣೆ ಒದಗಿಸಿದೆ. ಇದನ್ನು ತೆರವು ಮಾಡಬೇಕು” ಎಂದರು.
ಅದಕ್ಕೆ ನಾಗೇಶ್ ಅವರು “ತನಿಖಾಧಿಕಾರಿಗಳು ನೀಡಿದ ಮೊದಲ ನೋಟಿಸ್‌ಗೆ ಬಿಎಸ್‌ವೈ ವಕೀಲರ ಮೂಲಕ ಉತ್ತರಿಸಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದು ಆರೋಪಿಯ ಹಕ್ಕು. ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದು ವಿಚಾರಣೆಗೂ ಹಾಜರಾಗಿ, ತನಿಖೆಗೆ ಸಹಕರಿಸಿದ್ದಾರೆ” ಎಂದು ವಿವರಿಸಿದರು.