ಜಯಲಲಿತಾರಿಂದ ಜಪ್ತಿ ಮಾಡಿದ ವಸ್ತುಗಳ ವಿಲೇವಾರಿಗೆ ಎಸ್‌ಪಿಪಿ ನೇಮಿಸಲು ಗೃಹ ಇಲಾಖೆಗೆ ವಿಶೇಷ ನ್ಯಾಯಾಲಯದ ಪತ್ರ

2022ರ ಆಗಸ್ಟ್‌ 12ರಂದು ಜಯಲಲಿತಾ ಅವರಿಗೆ ಸೇರಿದ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡುವಂತೆ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿದ್ದ ಮಾಹಿತಿ ಹಕ್ಕು ಅಧಿಕಾರಿ.
Tamilnadu former CM J. Jayalalithaa
Tamilnadu former CM J. Jayalalithaa
Published on

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಬೆಳೆಬಾಳುವ ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ವಿಶೇಷ ನ್ಯಾಯಾಲಯ (ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ಕರ್ನಾಟಕ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದೆ.

ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ (ಪ್ರಥಮ ಮೇಲ್ಮನವಿ ಪ್ರಾಧಿಕಾರ) ನ್ಯಾಯಾಧೀಶರಾಗಿದ್ದ ರಾಮಚಂದ್ರ ಹುದ್ದಾರ್‌ ಅವರು ವಿಚಾರಣೆ ನಡೆಸಿದ್ದರು.

ಜಪ್ತಿ ಮಾಡಿರುವ ಜಯಲಲಿತಾ ಅವರ ವಸ್ತುಗಳ ವಿಲೇವಾರಿಗೆ ವಿಚಾರಣಾಧೀನ ನ್ಯಾಯಾಲಯವು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಪ್ರಕರಣದ ದಾಖಲೆ ಪರಿಶೀಲಿಸಿದಾಗ ವಿಶೇಷ ನ್ಯಾಯಾಲಯವು ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಕೋರಿದೆ. ನಂತರ ಇದೇ ವಿಚಾರವಾಗಿ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ಇತ್ತೀಚೆಗೆ ಮತ್ತೊಂದು ಪತ್ರ ಬರೆಯಲಾಗಿದೆ ಎಂಬುದು ತಿಳಿದು ಬಂದಿದೆ. ಹೀಗಾಗಿ, ಈ ಎಲ್ಲಾ ಮಾಹಿತಿ ಮತ್ತು ಪತ್ರಗಳ ಪ್ರತಿಗಳನ್ನು ಮೇಲ್ಮನವಿದಾರಿಗೆ ಒದಗಿಸಬೇಕು ಎಂದು ಮಾಹಿತಿ ಹಕ್ಕು ಅಧಿಕಾರಿಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರ ಆದೇಶಿಸಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ವಿಶೇಷ ನ್ಯಾಯಾಲಯವು ಜಯಲಲಿತಾಗೆ 4 ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿತ್ತು. ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಭಾರತೀಯ ರಿಸರ್ವ್‌ ಬ್ಯಾಕ್‌ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ಆದೇಶ ಮಾಡಲಾಗಿತ್ತು.

ಇದರಿಂದ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ, 2022ರ ಆಗಸ್ಟ್‌ 12ರಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಮಾಹಿತಿ ಹಕ್ಕು ಅಧಿಕಾರಿಗೆ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ, ಜಪ್ತಿ ಮಾಡಿರುವ ಜಯಲಲಿತಾ ಅವರಿಗೆ ಸೇರಿದ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಮಾಹಿತಿ ನೀಡಲು ನಿರಾಕರಿಸಿದ್ದ ಮಾಹಿತಿ ಹಕ್ಕು ಅಧಿಕಾರಿಯು 2022ರ ಸೆಪ್ಟೆಂಬರ್‌ 7ರಂದು ಅರ್ಜಿ ತಿರಸ್ಕರಿಸಿದ್ದರು. ಇದರಿಂದ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಮೇಲ್ಮನವಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

Also Read
ಮಾಜಿ ಸಿಎಂ ಜಯಲಲಿತಾರಿಂದ ವಶಪಡಿಸಿಕೊಂಡ ಸೀರೆ, ಬೆಳ್ಳಿ-ಬಂಗಾರ ಹರಾಜು ಹಾಕಲು ಸಿಜೆಐಗೆ ಪತ್ರ

ಮನವಿ ಏನು?: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳನಾಡು ಭ್ರಷ್ಟಾಚಾರ ನಿಗ್ರಹ ಮತ್ತ ವಿಚಕ್ಷಣಾ ದಳದ ಅಧಿಕಾರಿಗಳು 1996ರ ಡಿಸೆಂಬರ್‌ 11ರಂದು ಚೆನ್ನೈ ನಗರದ ಜಯಲಲಿತಾ ನಿವಾಸ ಪೊಯಸ್ ಗಾರ್ಡನ್ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈಗಾಗಲೇ ಪ್ರಕರಣ ಮುಕ್ತಾಯಗೊಂಡಿರುವ ಕಾರಣ ಆ ವಸ್ತುಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಯಾವುದೇ ಅಗತ್ಯ ಇಲ್ಲ. ಆದ್ದರಿಂದ ಆ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಅವುಗಳನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟಕ್ಕೆ ಇಟ್ಟರೆ, ಜಯಲಲಿತಾ ಕಡು ಬೆಂಬಲಿಗರು ದೊಡ್ಡ ಮೊತ್ತಕ್ಕೆ ಖರೀದಿ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಮೇಲ್ಮನವಿದಾರ ತಮ್ಮ ಮನವಿಯಲ್ಲಿ ತಿಳಿಸಿದ್ದರು.

ಏನೆಲ್ಲಾ ವಸ್ತುಗಳಿವೆ?: 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿ ಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ರೇಪ್‌ರೇಕಾರ್ಡರ್, 1,040 ವಿಡಿಯೊ ಕ್ಯಾಸೆಟ್, 3 ಐರನ್ ಲಾಕರ್, 1,93,202 ರು. ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.

Kannada Bar & Bench
kannada.barandbench.com