
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯದಿಂದ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ, ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಕೇಂದ್ರೀಯ ತನಿಖಾ ದಳ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ವಿಚಾರಣೆ ನಡೆಸಿದರು. ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಖಾನ್ ವಿಚಾರಣೆ ಅಗತ್ಯವಿದೆ.
“ಪ್ರಕರಣಗಳ ವಿಚಾರಣೆ ದಿನನಿತ್ಯ ನಡೆಯಲಿದ್ದು, ಚಂಚಲಗೂಡ ಜೈಲಿನಲ್ಲಿದ್ದರೆ ಜನಾರ್ದನ ರೆಡ್ಡಿ ಮತ್ತು ಅವರ ಸಹಾಯಕ ಮೆಹಫೂಜ್ ಅಲಿ ಖಾನ್ ಅವರನ್ನು ಬಾಡಿ ವಾರೆಂಟ್ ಮೇಲೆ ಹಾಜರುಪಡಿಸಲು ಕಷ್ಟವಾಗುವುದರಿಂದ ಜೂನ್ 6ರವರೆಗೆ ಪರಪ್ಪನ ಅಗ್ರಹಾರದಲ್ಲಿ ಇಡಲು ಹೈದರಾಬಾದ್‌ನ ಚಂಚಲಗೂಡ ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವುದು ಸೂಕ್ತವಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಅಲ್ಲದೇ, “ಈ ಆದೇಶವನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲ್ವಿಚಾರಕ್ಕೆ ಕಚೇರಿಯು ಇಮೇಲ್ ಮೂಲಕ ಮಾಹಿತಿ ಒದಗಿಸಿ, ಜೂನ್ 4ರವರೆಗೆ ರೆಡ್ಡಿ ಮತ್ತು ಖಾನ್ ಅವರನ್ನು ಇರಿಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಂಡು ಮುಂದಿನ ವಿಚಾರಣೆ ವೇಳೆಗೆ ಅವರನ್ನು ಭೌತಿಕವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ಆದೇಶವನ್ನು ಚಂಚಲಗೂಡ ಜೈಲಿನ ಮೇಲ್ವಿಚಾರಕರಿಗೂ ಕಳುಹಿಸಿಕೊಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ವೇಳೆ ಸಿಬಿಐ ಪರ ವಕೀಲೆ ಹೇಮಾ ಕಾರಂತ್ ಅವರು “ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿಯಮಿತವಾಗಿ ಹಾಜರುಪಡಿಸುವ ಅಗತ್ಯ ಇದೆ. ಹಾಗಾಗಿ, ಆರೋಪಿ ಜನಾರ್ದನ ರೆಡ್ಡಿ ಅವರನ್ನು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲು ಆದೇಶಿಸಬೇಕು” ಎಂದು ಕೋರಿದರು.
ಜನಾರ್ದನ ರೆಡ್ಡಿ ಮತ್ತು ಮೆಹಫೂಜ್ ಅಲಿ ಖಾನ್ ಪರ ವಕೀಲರು “ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ಬಾಕಿ ಇದ್ದು, ವಿಚಾರಣೆ ಆರಂಭವಾಗಿವೆ. ಓಬಳಾಪುರಂ ಪ್ರಕರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಅವರನ್ನು ಮರಳಿ ಚಂಚಲಗೂಡ ಜೈಲಿಗೆ ಮರಳಿ ಕಳುಹಿಸಿದರೆ ಇಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ” ಎಂದಿದ್ದರು.
ಬಾಡಿ ವಾರಂಟ್ ಅಡಿಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ನ ಚಂಚಲಗೂಡ ಕೇಂದ್ರ ಕಾರಾಗೃಹದಿಂದ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿತ್ತು.