ಅಕ್ರಮ ಗಣಿಗಾರಿಕೆ: ಸಚಿವ ನಾಗೇಂದ್ರ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

“ಮಂಡಿಸಲಾಗಿರುವ ದಾಖಲೆಗಳನ್ನು ಪರಿಶೀಲಿಸಿದರೆ ಮೇಲ್ನೋಟಕ್ಕೆ ಪ್ರಕರಣ ಇದೆ. ಹೀಗಾಗಿ ಸಂಜ್ಞೇಯ ತೆಗೆದುಕೊಳ್ಳಲಾಗಿದೆ” ಎಂದಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ.
Mining Baron G Janardhana Reddy, Congress MLA B Nagendra
Mining Baron G Janardhana Reddy, Congress MLA B Nagendra
Published on

ಅಕ್ರಮ ಗಣಿಗಾರಿಕೆಯ ಮೂಲಕ ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಸುಮಾರು 2.82 ಕೋಟಿ ರೂಪಾಯಿ ರಾಜಸ್ವ ಮತ್ತು ಇತರೆ ಶುಲ್ಕ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟರ ಕಲ್ಯಾಣ ಸಚಿವ ಬಿ ನಾಗೇಂದ್ರ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ 10 ಮಂದಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೋಮವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಸಮನ್ಸ್‌ ಜಾರಿ ಮಾಡಿದೆ.

ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ ಪ್ರಕರಣಕ್ಕೆ ಗುರಿಯಾದ ಮೊದಲ ಸಚಿವರು ಎನ್ನುವ ಅಪವಾದಕ್ಕೆ ನಾಗೇಂದ್ರ ಗುರಿಯಾಗಿದ್ದಾರೆ.

ಲೋಕಾಯುಕ್ತದ ತನಿಖಾಧಿಕಾರಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಈ ಕುರಿತಾದ ಆದೇಶ ಮಾಡಿದ್ದಾರೆ.

“ಜಿ ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌, ಮಧುಕರ್‌ ವರ್ಮ, ಬಿ ನಾಗೇಂದ್ರ, ಕೆ ನಾಗರಾಜ, ವಿ ಚಂದ್ರಶೇಖರ್‌, ಸಿ ಶ್ರೀಕಾಂತ್‌, ದೇವಿ ಮತ್ತು ಮಧುಶ್ರೀ ಎಂಟರ್‌ಪ್ರೈಸಸ್‌ ಹಾಗೂ ಈಗಲ್‌ ಟ್ರೇಡರ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 21 ಮತ್ತು 23, ಜೊತೆಗೆ 4(1) ಮತ್ತು 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಎಲ್ಲಾ ಆರೋಪಿಗಳಿಗೂ ಸಮನ್ಸ್‌ ಜಾರಿಗೊಳಿಸಬೇಕು” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.

“ನಮ್ಮ ಮುಂದೆ ಮಂಡಿಸಲಾಗಿರುವ ದಾಖಲೆಗಳನ್ನು ಪರಿಶೀಲಿಸಿದರೆ ಮೇಲ್ನೋಟಕ್ಕೆ ಪ್ರಕರಣ ಇದೆ. ಹೀಗಾಗಿ ಸಂಜ್ಞೇಯ ತೆಗೆದುಕೊಳ್ಳಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಸ್ವ ಮತ್ತು ಇತರೆ ಶುಲ್ಕ ಪಾವತಿಸದೇ ಆರೋಪಿಗಳು 22.282 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಾಟ ಮಾಡಿದ್ದಾರೆ. ಆರೋಪಿಗಳ ಈ ಕಾನೂನುಬಾಹಿರ ಚಟುವಟಿಕೆಯಿಂದ ಸರ್ಕಾರಕ್ಕೆ 2,81,72,322 ರೂಪಾಯಿ ನಷ್ಟವಾಗಿದೆ. ಹೀಗಾಗಿ, ಅವರ ವಿರುದ್ಧ ಸಂಜ್ಞೇಯ ಪರಿಗಣಿಸಬೇಕು ಎಂದು ದೂರುದಾರ ತನಿಖಾಧಿಕಾರಿ ಮಂಜುನಾಥ್‌ ಅಣ್ಣಿಗೇರಿ ಖಾಸಗಿ ದೂರು ದಾಖಲಿಸಿದ್ದರು.

Also Read
ಅಕ್ರಮ ಗಣಿಗಾರಿಕೆ ಹಗರಣ: ಶಾಸಕ ಬಿ ನಾಗೇಂದ್ರ ಸೇರಿ 8 ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲು ಆದೇಶ

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 379, 409, 447, 420, ಜೊತೆಗೆ ಸೆಕ್ಷನ್‌ 120(ಬಿ) ಅಡಿ ಆರೋಪಗಳಿಗೆ ತನಿಖಾಧಿಕಾರಿಯು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದು ಈ ಖಾಸಗಿ ದೂರಿಗೂ ಸಂಬಂಧಿಸಿದೆ. ಈ ಖಾಸಗಿ ದೂರನ್ನು ವಿಚಾರಣೆ ನಡೆಸುವಾಗ ಈಗಾಗಲೇ ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸಬೇಕು ಎಂದು ಕೋರಿದ್ದರು.

Also Read
ಅಕ್ರಮ ಅದಿರು ಮಾರಾಟ: ಜನಾರ್ದನ ರೆಡ್ಡಿ, ನಾಗೇಂದ್ರ ಸೇರಿ 16 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

ಅಕ್ರಮ ಗಣಿಗಾರಿಕಗೆ ಸಂಬಂಧಿಸಿದಂತೆ 2023ರ ಏಪ್ರಿಲ್‌ 13ರಂದು ಸುಮಾರು 211 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ನಾಗೇಂದ್ರ ಅವರನ್ನು ಒಳಗೊಂಡು ಮೇಲಿನ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ಒಂದು ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

Also Read
[ಅಕ್ರಮ ಅದಿರು ಮಾರಾಟ] ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

ಇದಕ್ಕೂ ಮುನ್ನ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 2022ರ ಜನವರಿ 17ರಂದು ಸುಮಾರು 9 ಕೋಟಿ ರೂಪಾಯಿ ರಾಜಸ್ವ ನಷ್ಟ ಉಂಟು ಮಾಡಿದ್ದಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಸೇರಿ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ. 2022ರ ಜನವರಿ 5ರಂದು ನಾಗೇಂದ್ರ ಮತ್ತು ಇತರರು 3 ಕೋಟಿ ತೆರಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಇನ್ನೊಂದು ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

Also Read
[ಅಕ್ರಮ ಗಣಿಗಾರಿಕೆ] ಶಾಸಕ ನಾಗೇಂದ್ರ ಹಾಗೂ ಗಾಲಿ ಆಪ್ತರ ವಿರುದ್ಧ ಮತ್ತೊಂದು ಕ್ರಿಮಿನಲ್‌ ದೂರು ದಾಖಲಿಸಲು ಆದೇಶ

2022ರ ಜನವರಿ 10ರಂದು 23.89 ಕೋಟಿ ರೂಪಾಯಿ ರಾಜಸ್ವ ಮತ್ತು ತೆರಿಗೆಯನ್ನು ಸರ್ಕಾರಕ್ಕೆ ನಷ್ಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ಮೆಹಫೂಜ್‌ ಅಲಿ ಖಾನ್‌ ಮತ್ತಿತರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

Attachment
PDF
Manjunath Annigeri Vs G Janardhana Reddy.pdf
Preview
Kannada Bar & Bench
kannada.barandbench.com