ಪುತ್ರಿಗೆ ಖಿನ್ನತೆ: ಲಂಡನ್ ಪ್ರವಾಸ ಕೈಗೊಳ್ಳಲು ಅಕ್ರಮ ಗಣಿಗಾರಿಕೆ ಆರೋಪಿ ಪಾಂಡುರಂಗ ಸಿಂಗ್‌ಗೆ ನ್ಯಾಯಾಲಯ ಸಮ್ಮತಿ
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಿಕ್ಕಪ್ಪ ಹಾಗೂ ಅಕ್ರಮ ಗಣಿಗಾರಿಕೆ ಆರೋಪಿ ಬಿ ಎಸ್ ಪಾಂಡುರಂಗ ಸಿಂಗ್ ಅವರು ಪತ್ನಿ ಜೊತೆ ವಿದೇಶ ಪ್ರವಾಸ ಕೈಗೊಳ್ಳಲು ಜಾಮೀನು ಆದೇಶದಲ್ಲಿ ಸಡಿಲಿಕೆ ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಆದೇಶ ಮಾಡಿದೆ (ಬಿ ಎಸ್ ಪಾಂಡುರಂಗ ಸಿಂಗ್ ವರ್ಸಸ್ ಎಸ್‌ಐಟಿ).
2015ರಲ್ಲಿ ಜಾಮೀನು ಮಂಜೂರು ಮಾಡುವಾಗ ವಿಧಿಸಲಾಗಿದ್ದ ಮೂರನೇ ಷರತ್ತಿನಲ್ಲಿ ಸಡಿಲಿಕೆ ಮಾಡುವಂತೆ ಕೋರಿ ಎಸ್ ವಿ ಮಿನರಲ್ಸ್ ಪಾಲುದಾರ ಬಿ ಎಸ್ ಪಾಂಡುರಂಗ ಸಿಂಗ್ ಅವರು ಸಲ್ಲಿಸಿದ್ದ ಮನವಿಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಅವರು ಮಾನ್ಯ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ರಾಜಧನ ಪಾವತಿಸದೇ ಅಪಾರ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುವ ಮೂಲಕ ಕ್ರಿಮಿನಲ್ ಅಪರಾಧ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಂಡುರಂಗ ಸಿಂಗ್ ಅವರಿಗೆ 2015ರ ಡಿಸೆಂಬರ್ 23ರಂದು ವಿಚಾರಣಾಧೀನ ನ್ಯಾಯಾಲಯವು ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಷರತ್ತುಬದ್ಧ ಜಾಮೀನು ನೀಡಿತ್ತು. ಈಗ ಇದರಲ್ಲಿ ಮಾರ್ಪಾಡು ಮಾಡಿರುವ ನ್ಯಾಯಾಲಯವು ಮೇ 3ರಿಂದ ಮೇ 21ರವರೆಗೆ ಲಂಡನ್ ಪ್ರವಾಸ ಕೈಗೊಳ್ಳಲು ಅನುಮತಿಸಿದೆ.
ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಹಾಲಿ ಬಳಕೆ ಮಾಡುತ್ತಿರುವ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ನೀಡಬೇಕು. ಪ್ರವಾಸ, ಅಲ್ಲಿ ಉಳಿದುಕೊಳ್ಳುವುದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕು. ವಿದೇಶದಿಂದ ಭಾರತಕ್ಕೆ ಮರಳಿದ 15 ದಿನಗಳ ಒಳಗೆ ಅಸಲಿ ವಿಮಾನದ ಟಿಕೆಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತುಗಳನ್ನು ಪೀಠವು ವಿಧಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರವಿ ವೈದ್ಯ ಅವರು “ಹಿಂದೆಯೂ ನ್ಯಾಯಾಲಯವು ಜಾಮೀನು ಷರತ್ತಿನಲ್ಲಿ ವಿನಾಯಿತಿ ನೀಡಿದ್ದು, ಅದರಂತೆ ಸಿಂಗ್ ನಡೆದುಕೊಂಡಿದ್ದಾರೆ. ಲಂಡನ್‌ನಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪುತ್ರಿ ಪ್ರಿಯಾಂಕಾ ಸಿಂಗ್ ಶಂಕರ್ ಪಾಂಡುರಂಗ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಓದಿನತ್ತ ಗಮನಹರಿಸಲು ಆಗುತ್ತಿಲ್ಲ. ಕೆಲವು ದಿನಗಳ ಕಾಲ ಲಂಡನ್‌ನಲ್ಲಿ ತನ್ನ ಜೊತೆ ನೆಲೆಸುವಂತೆ ಅರ್ಜಿದಾರರನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಪೋಷಕರಾಗಿ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಹೀಗಾಗಿ, ಲಂಡನ್ ಪ್ರವಾಸ ಕೈಗೊಳ್ಳಲು ಅನುಮತಿಸಬೇಕು” ಎಂದು ಮನವಿ ಮಾಡಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕರು “ಪುತ್ರಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಯನ್ನು ಅರ್ಜಿದಾರರು ಸಲ್ಲಿಸಿಲ್ಲ. 1.1.2020, 2.3.2020, 1.7.2020, 4.9.2020, 7.11.2020, 5.1.2021 ಮತ್ತು 2.3.2021ರಂದು ಮಾತ್ರ ಅರ್ಜಿದಾರರು ಸಂಬಂಧಿತ ಠಾಣೆಯಲ್ಲಿ ತಮ್ಮ ಹಾಜರಾತಿ ಹಾಕಿದ್ದು, ಉಳಿದ ದಿನಾಂಕದಂದು ಗೈರಾಗುವ ಮೂಲಕ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಅರ್ಜಿದಾರರು ಶ್ರೀಮಂತ ಮತ್ತು ಪ್ರಭಾವಿಯಾಗಿದ್ದಾರೆ. ಅವರಿಗೆ ಜಾಮೀನು ಷರತ್ತು ಸಡಿಲಿಕೆ ಮಾಡಿದರೆ ನಾಪತ್ತೆಯಾಗಿ, ವಿದೇಶದಲ್ಲಿ ನೆಲೆಸಬಹುದು. ಇದು ವಿಚಾರಣೆಗೆ ಅಡ್ಡಿ ಉಂಟು ಮಾಡಲಿದೆ. ವಿಚಾರಣೆ ಪ್ರಗತಿಯಲ್ಲಿರುವುದರಿಂದ ಅರ್ಜಿದಾರರ ಕೋರಿಕೆಗೆ ಅನುಮತಿಸಬಾರದು” ಎಂದು ಆಕ್ಷೇಪಿಸಿದ್ದರು.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ದೂರಿನ ಮೇರೆಗೆ ಅರ್ಜಿದಾರ ಸೇರಿದಂತೆ 13 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 379, 409, 420, 447, 468 ಮತ್ತು 471 ಜೊತೆಗೆ 120ಬಿ, ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ವಿಶೇಷ ತನಿಖಾ ದಳವು ಪ್ರಕರಣದ ವಿಚಾರಣೆ ನಡೆಸುತ್ತಿದೆ.