
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಕೇಂದ್ರಿತವಾಗಿರುವ ಮುಡಾ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅವರ ಬದಲಾವಣೆ ಕೋರಿ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ಅಲ್ಲದೇ, ಮುಡಾ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಮತ್ತೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ.
ಆದರೆ, ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಭಾವ ಮೈದುನ ಬಿ ಎಂ ಮಲ್ಲಿಕಾರ್ಜುನ್, ಆಕ್ಷೇಪಾರ್ಹವಾದ ಭೂಮಿಯ ಮಾಲೀಕ ದೇವರಾಜ್ ವಿರುದ್ಧ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಹಾಕಿರುವುದಕ್ಕೆ ಆಕ್ಷೇಪಿಸಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಪ್ರತಿಭಟನಾ ಅರ್ಜಿಯ ಸಂಬಂಧ ನ್ಯಾಯಾಲಯವು ಇಂದು ಯಾವುದೇ ಆದೇಶ ಮಾಡಿಲ್ಲ.
ಇದರ ಜೊತೆಗೆ ಪಕ್ಷಪಾತ ಧೋರಣೆ ಅನುಸುರಿಸುತ್ತಿರುವ ತನಿಖಾಧಿಕಾರಿ ಉದೇಶ್ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿರುವ ಮಧ್ಯಂತರ ಅರ್ಜಿ ಹಾಗೂ ಇಡೀ ಮುಡಾ ಹಗರಣದ ಸಂಬಂಧ ಒಂದೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಬದಲಾಗಿ ಪ್ರತಿ ಸರ್ವೇ ನಂಬರ್‌ಗೆ ಒಂದರಂತೆ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಕೋರಿದ್ದು, ಅದರ ಸಂಬಂಧವೂ ನ್ಯಾಯಾಲಯ ಇಂದು ಯಾವುದೇ ಆದೇಶ ಮಾಡಿಲ್ಲ.
ಪ್ರಕರಣದ ಹಿನ್ನೆಲೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2024ರ ಆಗಸ್ಟ್ 8ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು ಹಾಗೂ ಇತರೆ ಶೀರ್ಷಿಕೆಯಡಿ ಐವರನ್ನು ಆರೋಪಿಗಳನ್ನಾಗಿಸಲಾಗಿತ್ತು.
ಇದರ ಬೆನ್ನಿಗೇ ರಾಜ್ಯಪಾಲರು ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ತನಿಖೆಗೆ ಅನುಮತಿಸಿದ್ದರು. ಇದನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯಪಾಲರ ನಿರ್ಣಯ ಹೈಕೋರ್ಟ್ ಎತ್ತಿ ಹಿಡಿಯುತ್ತಿದ್ದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಇದರ ಅನ್ವಯ 2024ರ ಸೆಪ್ಟೆಂಬರ್ 27ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರ ಭಾಗವಾಗಿ 2025ರ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಒಳಗೊಂಡು ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.