ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ: ಅಪರಾಧಿ ಪ್ರಜ್ವಲ್‌ಗೆ ಜೀವನ ಪರ್ಯಂತ ಸೆರೆವಾಸ ವಿಧಿಸಿದ ವಿಶೇಷ ನ್ಯಾಯಾಲಯ

ಸಂತ್ರಸ್ತೆಯ ಮೇಲೆ ಪ್ರಜ್ವಲ್‌ ಮೊದಲ ಬಾರಿಗೆ ಹಾಸನದ ಗನ್ನಿಗಢ ಫಾರ್ಮ್‌ ಹೌಸ್‌, ಆನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಆರೋಪ ಮಾಡಲಾಗಿತ್ತು.
ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ: ಅಪರಾಧಿ ಪ್ರಜ್ವಲ್‌ಗೆ ಜೀವನ ಪರ್ಯಂತ ಸೆರೆವಾಸ ವಿಧಿಸಿದ ವಿಶೇಷ ನ್ಯಾಯಾಲಯ
Published on

ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನಿಸಲ್ಪಟ್ಟಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಶನಿವಾರ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ಹಾಗೂ ₹11.60 ಲಕ್ಷ ದಂಡವನ್ನುವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣಗೆ ಸೇರಿದ ಗನ್ನಿಗಢ ತೋಟದ ಮನೆಯಲ್ಲಿ ಮತ್ತು ಬೆಂಗಳೂರಿನ ಬನಶಂಕರಿಯಲ್ಲಿನ ರೇವಣ್ಣ ನಿವಾಸದಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶುಕ್ರವಾರ ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಅಪರಾಧಿ ಎಂದು ತೀರ್ಮಾನಿಸಿದ್ದರು.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ನ್ಯಾಯಾಲಯವು ಪದೇಪದೇ ಅತ್ಯಾಚಾರವೆಸಗಿದ ಆರೋಪಕ್ಕೆ ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ಮತ್ತು ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರದ ಆರೋಪಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ ಐದು ಲಕ್ಷ ದಂಡವನ್ನು ವಿಧಿಸಿದೆ. ಒಟ್ಟಾರೆ ₹11.60 ಲಕ್ಷ ದಂಡವನ್ನು ನ್ಯಾಯಾಲಯ ವಿಧಿಸಿದ್ದು, ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ವಿತರಿಸಲು ನ್ಯಾಯಾಲಯ ನಿರ್ದೇಶಿಸಿದೆ. ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ನೀಡಲು ಆದೇಶಿಸಲಾಗಿದೆ.

ಯಾವೆಲ್ಲಾ ಅಪರಾಧಕ್ಕೆ ಎಷ್ಟು ಶಿಕ್ಷೆ ಮತ್ತು ಎಷ್ಟು ವಿಧಿಸಲಾಗಿದೆ ಎಂಬುದರ ವಿವರ ಇಲ್ಲಿದೆ. ಎಲ್ಲಾ ಶಿಕ್ಷೆಯು ಏಕಕಾಲಕ್ಕೆ ಜಾರಿ ಬರಲಿದೆ.

  • 376(2)(ಎನ್‌) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಮತ್ತು ₹5 ಲಕ್ಷ ದಂಡ;

  • 376(2)(ಕೆ) (ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹5 ಲಕ್ಷ ದಂಡ;

  • 354(ಬಿ) (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಅಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ ₹50,000 ದಂಡ;

  • 354-ಎ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ

  • 354(ಸಿ) (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ;

  • 201 (ಅಪರಾಧ ಕೃತ್ಯದ ಸಾಕ್ಷಿ ನಾಶ) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ

  • ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ (ಖಾಸಗಿತನದ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ

  • 506 (ಕ್ರಿಮಿನಲ್‌ ಬೆದರಿಕೆ) 2 ವರ್ಷ ಶಿಕ್ಷೆ, ₹10,000 ದಂಡ.

ಇಂದು ಶಿಕ್ಷೆ ನಿರ್ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಮತ್ತು ಬಿ ಎನ್‌ ಜಗದೀಶ್‌ ಹಾಗೂ ಪ್ರಜ್ವಲ್‌ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರ ವಾದವನ್ನು ನ್ಯಾಯಾಲಯ ಆಲಿಸಿತು.

ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್‌ ಪರ ಬಿ ಎನ್‌ ಜಗದೀಶ್‌ ಅವರು “ಜೀವನೋಪಾಯಕ್ಕಾಗಿ ಮನೆಕೆಲಸಕ್ಕೆ ಸೇರಿದ ಅನಕ್ಷರಸ್ಥೆಯ ಮೇಲೆ ಪ್ರಜ್ವಲ್‌ ಪದೇಪದೇ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೇಳೆ ಸೆರೆ ಹಿಡಿದಿರುವ ವಿಡಿಯೊಗಳು ವೈರಲ್‌ ಆಗುತ್ತಿದ್ದಂತೆ ಸಂತ್ರಸ್ತೆ ಮಾನಸಿಕವಾಗಿ ಹಿಂಸೆ ಅನುಭವಿಸಿ, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಸಾಕಷ್ಟು ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪ್ರಜ್ವಲ್‌ ವಿಡಿಯೋ ಮಾಡಿದ್ದಾನೆ. ಈತ ಚಟಗಾರನಾಗಿದ್ದು, ಆತನ ವಿರುದ್ದ ಇನ್ನೂ ಮೂರು ಅತ್ಯಾಚಾರ ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರಜ್ವಲ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಬೇಕು” ಎಂದು ಕೋರಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯಕ್‌ ಅವರು “ಅತ್ಯಂತ ಎಳೆಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್‌ ಎಸಗಿರುವ ಕೃತ್ಯ ಹೀನವಾದುದು. ಹೀಗಾಗಿ, ಪ್ರಜ್ವಲ್‌ಗೆ ದುಬಾರಿ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು. ದಂಡದ ಪೈಕಿ ಹೆಚ್ಚಿನ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವಿಡಿಯೊ ವೈರಲ್‌ ಆದುದರಿಂದ ಸಂತ್ರಸ್ತೆಯು ಸಾಮಾಜಿಕವಾಗಿ ಮುಜುಗರ, ಅವಮಾನ ಅನುಭವಿಸಿದ್ದಾರೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದ್ದರು.

ಪ್ರಜ್ವಲ್‌ ಪರ ಹಿರಿಯ ವಕೀಲ ನಳಿನಾ ಮಾಯೇಗೌಡ ಅವರು “ಪ್ರಜ್ವಲ್‌ ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ. ಜನಸೇವೆಗೆ ಅವರು ರಾಜಕಾರಣಕ್ಕೆ ಬಂದಿದ್ದರು. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಶ್ಲೀಲ ವಿಡಿಯೊಗಳನ್ನು ಬಹಿರಂಗಗೊಳಿಸಲಾಗಿದೆ. ಪ್ರಜ್ವಲ್‌ ರಾಜಕೀಯ ಹಿನ್ನೆಲೆಯನ್ನು ಶಿಕ್ಷೆ ವಿಧಿಸಲು ಪರಿಗಣಿಸಬಾರದು. ಸಂಸದರಾಗಿ ಪ್ರಜ್ವಲ್‌ ಮಾಡಿರುವ ಕೆಲಸಕ್ಕೆ ಚ್ಯುತಿಯಾಗಬಾರದು. ಆತನಿಗೆ ಕೇವಲ 34 ವರ್ಷವಷ್ಟೆ. ಸಂತ್ರಸ್ತೆಯು ಸಮಾಜದಿಂದ ತಿರಸ್ಕೃತವಾಗಿಲ್ಲ. ಆಕೆ ಕುಟುಂಬದ ಜೊತೆ ಜೀವನ ಮುಂದುವರಿಸಿದ್ದಾರೆ. ಪ್ರಜ್ವಲ್‌ ಎಲ್ಲಾ ರೀತಿಯ ನಷ್ಟವಾಗಿದ್ದು, ತೇಜೋವಧೆಯಾಗಿದೆ” ಎಂದು ವಾದಿಸಿದ್ದರು.

ವಿಚಾರಣೆ ವೇಳೆ ಪ್ರಜ್ವಲ್‌ಗೂ ತಮ್ಮ ಅನಿಸಿಕೆ ವ್ಯಕ್ತಪಡಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಈ ವೇಳೆ ಪ್ರಜ್ವಲ್‌ “ನಾನು ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಸಂಸದನಾಗಿದ್ದ ಸಂದರ್ಭದಲ್ಲಿ ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಆರೋಪಿಸಿರಲಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ. ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರನಾದ ನಾನು ಮೆರಿಟ್‌ ವಿದ್ಯಾರ್ಥಿ. ರಾಜಕೀಯದಲ್ಲಿ ನಾನು ಬೇಗ ಬೆಳೆದಿದ್ದು, ನನಗೆ ಮುಳುವಾಯಿತು” ಎಂದು ಗದ್ಗದಿತರಾಗಿದ್ದರು.

ಪ್ರಕರಣ ಸಾಗಿ ಬಂದ ಹಾದಿ:

2025ರ ಏಪ್ರಿಲ್‌ 3ರಂದು ಪ್ರಜ್ವಲ್‌ ವಿರುದ್ಧ ಆರೋಪ ನಿಗದಿ ಮಾಡಿದ್ದ ನ್ಯಾಯಾಲಯವು ಆನಂತರ ಮೇ 5ರಂದು ವಿಚಾರಣೆ ಆರಂಭಿಸಿತ್ತು. ಅಂದಿನಿಂದ ಜೂನ್‌ 28ರವರೆಗೆ ಒಟ್ಟು 22 ದಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು. ಆನಂತರ ಕೆಲವು ತಾಂತ್ರಿಕ ಸಾಕ್ಷಿಗಳ ಕುರಿತು ಸ್ಪಷ್ಟನೆ ಕೋರಿ ತೀರ್ಪಿನ ಪ್ರಕಟಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

Also Read
ʼರಾಜಕೀಯದಲ್ಲಿ ಬೇಗ ಬೆಳೆದಿದ್ದು, ಮುಳುವಾಗಿದೆʼ ಎಂದ ಪ್ರಜ್ವಲ್;‌ ಜೀವಾವಧಿ ಶಿಕ್ಷೆಗೆ ಪ್ರಾಸಿಕ್ಯೂಷನ್‌ ಮನವಿ

“ಪ್ರಜ್ವಲ್‌ ಅಪರಾಧಿ ಎಂದು ನಿರ್ಧರಿಸುವ ವಿಚಾರದಲ್ಲಿ ದೂರುದಾರೆ ಮಹಿಳೆಯು ತೋರಿದ ಅಚಲವಾದ ನಿಲುವು ಅತ್ಯಂತ ಮುಖ್ಯವಾಗಿದೆ. ಉಳಿದಂತೆ ವಿಶೇಷ ತನಿಖಾ ದಳದ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಷನ್‌ ಕಾನೂನು ತಂಡ ತನ್ನ ಕೆಲಸ ಮಾಡಿದೆ” ಎಂದು ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿರುವ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಮತ್ತು ಅಶೋಕ್‌ ನಾಯಕ್‌ ಹೇಳಿದ್ದಾರೆ. ಪ್ರಜ್ವಲ್‌ ಪರ ವಕೀಲರಾದ ಜಿ ಅರುಣ್‌ ಹಾಗೂ ವಿಪುಲ್‌ ಜೈನ್‌ ಅವರು ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ.

ಮೈಸೂರಿನ ಕೆ ಆರ್‌ ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಎಸ್ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಕಳೆದ ವರ್ಷದ ಅಂತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಜ್ವಲ್‌ ಮೊದಲ ಬಾರಿಗೆ ಸಂತ್ರಸ್ತೆಯ ಮೇಲೆ ಹಾಸನದ ಗನ್ನಿಗಢ ಫಾರ್ಮ್‌ ಹೌಸ್‌ ಮತ್ತು ಆನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಎಂದು ಆರೋಪಿಸಲಾಗಿತ್ತು.ಪ್ರಜ್ವಲ್‌ ರೇವಣ್ಣ ವಿದೇಶದಿಂದ ಮರಳುತ್ತಿದ್ದಂತೆ 2024ರ ಮೇ 21ರಂದು ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಇಂದಿನಿಂದ ಇಂದಿನವರೆಗೂ ಪ್ರಜ್ವಲ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com