ಶಾಸಕ ಮುನಿರತ್ನ ಅ.5ರವರೆಗೆ ಎಸ್‌ಐಟಿ ವಶಕ್ಕೆ

ಸಿಐಡಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ ಬಿ ಕೆ ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಮುನಿರತ್ನ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರವು ಸೆ.21ರಂದು ಆದೇಶಿಸಿದೆ.
BJP MLA Munirathna
BJP MLA Munirathna
Published on

ಅತ್ಯಾಚಾರ ಪ್ರಕರಣದಲ್ಲಿ ಬಂಧಿತವಾಗಿರುವ ಬಿಜೆಪಿಯ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅಕ್ಟೋಬರ್‌ 5ರವರೆಗೆ ವಿಶೇಷ ತನಿಖಾ ದಳದ (ಎಸ್‌ಐಟಿ) ಕಸ್ಟಡಿಗೆ ನೀಡಿದೆ.

ಮುನಿರತ್ನರನ್ನು ಕಸ್ಟಡಿಗೆ ನೀಡುವಂತೆ ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಪುರಸ್ಕರಿಸಿದರು.

ಸಿಐಡಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ ಬಿ ಕೆ ಸಿಂಗ್‌ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಮುನಿರತ್ನ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರವು ಸೆಪ್ಟೆಂಬರ್‌ 21ರಂದು ಆದೇಶಿಸಿತ್ತು. ಕೇಂದ್ರ ವಲಯದ ಪೊಲೀಸ್‌ ಮಹಾನಿರೀಕ್ಷಕ ಲಾಬುರಾಮ್‌, ಪೊಲೀಸ್‌ ಅಧೀಕ್ಷಕರಾದ ಸೌಮ್ಯಲತಾ ಮತ್ತು ಸಿ ಎ ಸೈಮನ್‌ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.

Also Read
ಅತ್ಯಾಚಾರ ಪ್ರಕರಣ: ಶಾಸಕ ಮುನಿರತ್ನರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ವಿಶೇಷ ನ್ಯಾಯಾಲಯ

ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್‌ ದಾಖಲಿಸಿರುವ ಜಾತಿ ನಿಂದನೆ, ಗುತ್ತಿಗೆದಾರ ಚೆಲುವರಾಜುವಿಗೆ ಲಂಚಕ್ಕೆ ಬೇಡಿಕೆ ಮತ್ತು ಬೆದರಿಕೆ ಹಾಕಿದ ಸಂಬಂಧ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಆರೋಪ ಸಂಬಂಧ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಮುನಿರತ್ನ ಮತ್ತು ಇತರೆ ಐದು ಮಂದಿಯ ಎಫ್‌ಐಆರ್‌ ದಾಖಲಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಸರ್ಕಾರದಕ್ಕೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣಗಳನ್ನು ಎಸ್‌ಐಟಿಗೆ ನೀಡಲಾಗಿದೆ. ಅದಲ್ಲದೇ, ಮುನಿರತ್ನ ಮತ್ತು ಇತರರ ವಿರುದ್ದ ದಾಖಲಾಗಬಹುದಾದ ಪ್ರಕರಣಗಳನ್ನೂ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಜಾತಿ ನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಹಾಕಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ ಮುನಿರತ್ನಗೆ ಜಾಮೀನು ದೊರೆತಿದೆ. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿರುವ ಅರ್ಜಿಯ ವಿಚಾರಣೆ ಬಾಕಿಯಿದೆ.

Kannada Bar & Bench
kannada.barandbench.com