ವಿಶೇಷ ವಿವಾಹ ಕಾಯಿದೆ- 1954ರ ಅಡಿ ತಾವು ಮದುವೆಯಾಗಲು ಮತ್ತು ವಿವಾಹ ನೋಂದಣಿ ಮಾಡಿಕೊಳ್ಳಲು ಪೊಲೀಸ್ ರಕ್ಷಣೆ ಬೇಕು ಎಂದು ಕೋರಿ ಅಂತರ್ಧರ್ಮೀಯ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್ ಹಿಂದೂ ಹುಡುಗಿಯೊಂದಿಗಿನ ಮುಸ್ಲಿಂ ಹುಡುಗನ ವಿವಾಹ ಮಹಮದೀಯ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದಿತು.
ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾದರೂ ಆ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ದೋಷಯುಕ್ತ (ಫಾಸಿದ್) ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ನ್ಯಾ. ಗುರುಪಾಲ್ ಸಿಂಗ್ ಅಹ್ಲುವಾಲಿಯಾ ತಿಳಿಸಿದರು.
“ಮಹಮದೀಯ ಕಾನೂನಿನ ಪ್ರಕಾರ, ವಿಗ್ರಹ ಅಥವಾ ಅಗ್ನಿ ಆರಾಧಿಸುವ ಹುಡುಗಿಯೊಂದಿಗೆ ಮುಸ್ಲಿಂ ಹುಡುಗನ ವಿವಾಹ ಮಾನ್ಯವಾದ ವಿವಾಹವಾಗದು. ವಿಶೇಷ ವಿವಾಹ ಕಾಯಿದೆಯಡಿ ವಿವಾಹವನ್ನು ನೋಂದಾಯಿಸಿದ್ದರೂ ಸಹ, ಆ ಮದುವೆ ಇನ್ನು ಮುಂದೆ ಮಾನ್ಯವಾದ ವಿವಾಹವಾಗಿರದೆ ದೋಷಯುಕ್ತ (ಫಾಸಿದ್) ಮದುವೆ ಎನಿಸಿಕೊಳ್ಳುತ್ತದೆ” ಎಂಬುದಾಗಿ ನ್ಯಾಯಾಲಯ ಮೇ 27ರ ಆದೇಶದಲ್ಲಿ ಹೇಳಿದೆ.
ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷ ಜೋಡಿ ನಡುವಿನ ಸಂಬಂಧಕ್ಕೆ ಮಹಿಳೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಂತರ್ಧರ್ಮೀಯ ವಿವಾಹ ನಡೆದರೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದ ಜೋಡಿ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಲು ಬಯಸಿದ್ದರು.
ಮದುವೆಗಾಗಿ ಮಹಿಳೆ ಅಥವಾ ಪುರುಷ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವುದಿಲ್ಲ ಮಹಿಳೆ ಹಿಂದೂ ಧರ್ಮವನ್ನು ಅನುಸರಿಸುವುದನ್ನು ಮುಂದುವರೆಸಿದರೆ, ಪುರುಷನು ಅವರ ಮದುವೆಯ ನಂತರ ಇಸ್ಲಾಂ ಧರ್ಮವನ್ನು ಅನುಸರಿಸುವುದನ್ನು ಮುಂದುವರಿಸುತ್ತಾನೆ. ಜೋಡಿ ಮದುವೆಯಾಗಲು ಮತ್ತು ವಿವಾಹ ನೋಂದಣಿ ಮಾಡಿಕೊಳ್ಳಲು ಪೊಲೀಸ್ ರಕ್ಷಣೆ ಬೇಕು ಎಂದು ಜೋಡಿಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ವೈಯಕ್ತಿಕ ಕಾನೂನಿನಡಿಯಲ್ಲಿ ಅಂತರ್ಧರ್ಮೀಯ ವಿವಾಹವನ್ನು ನಿಷೇಧಿಸಲಾಗಿದ್ದರೂ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವಾಗಿರುತ್ತದೆ. ವಿಶೇಷ ವಿವಾಹ ಕಾಯಿದೆ ವೈಯಕ್ತಿಕ ಕಾನೂನಿಗೂ ಮಿಗಿಲು ಎಂದು ಅವರು ವಾದಿಸಿದರು.
ಧಾರ್ಮಿಕ ವಿಧಿವಿಧಾನಗಳ ಪಾಲನೆ ಮಾಡದ ವಿಚಾರವಾಗಿ ವಿಶೇಷ ವಿವಾಹ ಕಾಯಿದೆಯಡಿ ವಿವಾಹವನ್ನು ಪ್ರಶ್ನಿಸಲಾಗದಿದ್ದರೂ ವೈಯಕ್ತಿಕ ಕಾನೂನಿನಡಿಯಲ್ಲಿ ನಿಷೇಧಿತವಾಗಿದ್ದರೆ ಅಂತಹ ವಿವಾಹ ಕಾನೂನುಬದ್ಧ ವಿವಾಹವಾಗದು ಎಂದು ನ್ಯಾಯಾಲಯ ತಿಳಿಸಿತು.
ಜೋಡಿ ಮದುವೆಯಾಗದೆ ಲಿವ್-ಇನ್ ಸಂಬಂಧದಲ್ಲಿ ಇರಲು ಸಿದ್ಧರಿಲ್ಲ ಇಲ್ಲವೇ ಹುಡುಗಿ (ಹಿಂದೂ ವ್ಯಕ್ತಿ) ಹುಡುಗನ ಧರ್ಮಕ್ಕೆ (ಇಸ್ಲಾಂ) ಮತಾಂತರಗೊಳ್ಳಲು ಸಿದ್ಧಳಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತು.