ಅಸ್ಸಾಂನ ಚಾಬುವಾದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಶಿವಸಾಗರ್ ಶಾಸಕ ಅಖಿಲ್ ಗೊಗೊಯ್ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ. ಪ್ರತಿಭಟನೆ ಮಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸಿಎಎ ವಿರುದ್ಧ ಗೊಗೊಯ್ ತಮ್ಮ ಭಾಷಣದಲ್ಲಿ ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದರೂ ಅವರು ಯಾವುದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರಲಿಲ್ಲ ಎಂದು ವಿಶೇಷ ನ್ಯಾಯಾಧೀಶ ಪ್ರಾಂಜಲ್ ದಾಸ್ ತಿಳಿಸಿದರು. ಹೀಗಾಗಿ ಮೇಲ್ನೋಟಕ್ಕೆ ಗೊಗೋಯಿ ಅವರನ್ನು ಗಲಭೆಗೆ ಪ್ರಚೋದನೆ, ಕಾನೂನುಬಾಹಿರ ಸಭೆ ಆಸ್ತಿಪಾಸ್ತಿಗೆ ಹಾನಿ, ಕರ್ತವ್ಯ ನಿರತ ಅಧಿಕಾರಿಗೆ ಅಡ್ಡಿ ಅಥವಾ ಯುಎಪಿಎ ಅಡಿಯಲ್ಲಿ ಭಯೋತ್ಪಾದನೆಗೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಗೊಗೋಯಿ ಅವರಲ್ಲದೆ ಪ್ರಕರಣದ ಇತರ ಆರೋಪಿಗಳಾದ ಜಗಜಿತ್ ಗೊಹೈನ್ ಹಾಗೂ ಭೂಪೆನ್ ಗೊಗೋಯಿ ಅವರನ್ನು ಕೂಡ ನ್ಯಾಯಾಲಯ ಬಿಡುಗಡೆ ಮಾಡಿತು. ಆದರೆ ನಾಲ್ಕನೇ ಆರೋಪಿ ಭಾಸ್ಕರ್ ಜಿತ್ ಪುಕಾನ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
"ಕರ್ತವ್ಯ ನಿರತನಾಗಿದ್ದಾಗ ಅಖಿಲ್ ಗೊಗೋಯಿ ನೇತೃತ್ವದ ಸುಮಾರು 6,000 ಜನರಿದ್ದ ಗುಂಪೊಂದು ನನ್ನನ್ನು ಸುತ್ತುವರೆದು ಕಲ್ಲು ತೂರಾಟ ನಡೆಸಿತು. ಇದರಿಂದ ನನಗೆ ಗಾಯವಾಯಿತು. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಹತ್ಯೆಗೆ ಗುಂಪು ಯತ್ನಿಸಿತ್ತು" ಎಂದು ಚಬುವಾದ ಸಬ್ ಇನ್ಸ್‌ಪೆಕ್ಟರ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಮತ್ತು ಯುಎಪಿಎ ಕಾಯಿದೆಯ ಸೆಕ್ಷನ್ 16ರ ಅಡಿ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಕೆಲವು ಸಾಕ್ಷಿಗಳು, ಗೊಗೋಯಿ ಹಿಂಸೆಗೆ ಪ್ರಚೋದನೆ ನೀಡಿದರು ಎಂದರೆ ಇನ್ನೂ ಕೆಲವರು ಅದನ್ನು ಅಲ್ಲಗಳೆದಿದ್ದರು. ಆಗ ಭಾಷಣವನ್ನಷ್ಟೇ ಪರಿಶೀಲಿಸಿದ ನ್ಯಾಯಾಲಯ ಗೊಗೋಯಿ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.
ಕುತೂಹಲಕಾರಿ ಸಂಗತಿ ಎಂದರೆ ಇತ್ತೀಚೆಗೆ ಆಸಿಫ್ ತನ್ಹಾ, ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಅವರಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ತೀರ್ಪು ಆಧರಿಸಿ ನ್ಯಾಯಾಲಯ ಆದೇಶ ನೀಡಿದೆ.