ಜೈಲಲ್ಲಿ ಶಶಿಕಲಾಗೆ ಐಷಾರಾಮಿ ಸೌಕರ್ಯ: ಜೈಲು ಅಧೀಕ್ಷಕ ಕೃಷ್ಣ ಕುಮಾರ್‌ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್‌ ತಡೆ

ರಾಜ್ಯ ಸರ್ಕಾರವು 2018ರ ಫೆಬ್ರವರಿ 26ರಂದು ಒಪ್ಪಿಕೊಂಡಿದೆ. ಆ ವರದಿಯಲ್ಲಿ ಅರ್ಜಿದಾರರ ವಿರುದ್ಧದ ಯಾವುದೇ ಆರೋಪವಿಲ್ಲ ಎಂದು ಹಿರಿಯ ವಕೀಲ ಪೊನ್ನಣ್ಣ ವಾದಿಸಿದ್ದಾರೆ.
V K Sasikala and Karnataka HC
V K Sasikala and Karnataka HC
Published on

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜೆ ಅನುಭವಿಸುತ್ತಿದ್ದ ವೇಳೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ಅವರಿಗೆ ಐಷಾರಾಮಿ ಸೌಕರ್ಯ ಕಲ್ಪಿಸಿದ ಆರೋಪ ಎದುರಿಸುತ್ತಿರುವ ಬೆಳಗಾವಿ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಕೃಷ್ಣಕುಮಾರ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರು ಸರ್ಕಾರದ ಆದೇಶಕ್ಕೆ ತಡೆ ನೀಡಿ ಆದೇಶಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ (ಬಂಧೀಖಾನೆ) ಅಧೀನ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹೆಚ್ಚುವರಿ ಮಹಾ ನಿರ್ದೇಶಕ ಮತ್ತು ಅಧೀಕ್ಷಕರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

ಅರ್ಜಿದಾರ ಪರ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು “ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ನಿವೃತ್ತ ಕಾರಾಗೃಹ ಡಿಜಿಪಿ ಎಚ್ ಎನ್ ಸತ್ಯಾನಾರಾಯಣ ರಾವ್ ಅವರು ಎರಡು ಕೋಟಿ ರೂಪಾಯಿ ಹಣ ಪಡೆದ ಆರೋಪವಿದೆ. ಪ್ರಕರಣ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಎಸ್ ವಿನಯ್ ಕುಮಾರ್ ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರವು 2018ರ ಫೆಬ್ರವರಿ 26ರಂದು ಒಪ್ಪಿಕೊಂಡಿದೆ. ಆ ವರದಿಯಲ್ಲಿ ಅರ್ಜಿದಾರರ ವಿರುದ್ಧದ ಯಾವುದೇ ಆರೋಪವಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

Also Read
ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ: ತಪ್ಪಿತಸ್ಥರ ವಿರುದ್ಧ ತಿಂಗಳಲ್ಲಿ ಕ್ರಮಕ್ಕೆ ಸರ್ಕಾರಕ್ಕೆ ಹೈಕೋರ್ಟ್‌ ಗಡುವು

“ವಿನಯ್ ಕುಮಾರ್ ಅವರ ವರದಿ ಪರಿಗಣಿಸಿ ತನಿಖೆ ನಡೆಸುವಂತೆ ಸರ್ಕಾರ ಎಸಿಬಿಗೆ ನಿರ್ದೇಶಿಸಿತ್ತು. ಎಸಿಬಿ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಯಾವುದೇ ನಿರ್ದಿಷ್ಟ ಆರೋಪ ಇಲ್ಲದ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಕ್ರಮವಾಗಿದೆ” ಎಂದರು.

ಪ್ರಕರಣದ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಎಸಿಬಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ 2021ರ ಡಿಸೆಂಬರ್‌ 31ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೃಷ್ಣ ಕುಮಾರ್ ಅರ್ಜಿಯಲ್ಲಿ ಕೋರಿದ್ದಾರೆ.

Kannada Bar & Bench
kannada.barandbench.com