ಮಗುವಿಗೆ ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ ಕಾಯಿಲೆ: ಹೈಕೋರ್ಟ್‌ನಿಂದ 10 ದಿನಗಳ ಕಾಲಾವಕಾಶ ಕೋರಿದ ಕೇಂದ್ರ ಸರ್ಕಾರ
ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ (ಸ್ಪೈನಲ್ ಮಸ್ಕ್ಯುಲರ್ ಆಸ್ಟ್ರೊಫಿ ಟೈಪ್-1) ಕಾಯಿಲೆಯಿಂದ ಬಳಲುತ್ತಿರುವ ಒಂದೂವರೆ ವರ್ಷದ ಮಗು ಜನೀಶ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅಪರೂಪದ ಕಾಯಿಲೆಗಳ ತಾಂತ್ರಿಕ ಸಮಿತಿಯ ವರದಿಗಾಗಿ ಕಾಯುತ್ತಿದ್ದು, 10 ದಿನಗಳ ಕಾಲಾವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ಅನುವಂಶೀಯ ಕಾಯಿಲೆಯ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸಲು ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಗುವಿನ ತಂದೆ ನವೀನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರ ವಕೀಲ ಎಂ ಎನ್ ಕುಮಾರ್ ಅವರು “ವೈದ್ಯಕೀಯ ತಜ್ಞರು ಮಗುವಿನ ತಪಾಸಣೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗೆ ತಜ್ಞರ ಸಮಿತಿಯ ವರದಿ ನೀಡುವಂತೆ ಸೂಚಿಸಲಾಗಿದೆ. ಅಪರೂಪದ ಕಾಯಿಲೆಗಳ ತಾಂತ್ರಿಕ ಸಮಿತಿಯ ವರದಿಗಾಗಿ ಕಾಯಲಾಗುತ್ತಿದೆ. ಆದ್ದರಿಂದ, ಈ ಕುರಿತು ನಿರ್ಧಾರ ತಿಳಿಸಲು 10 ದಿನ ಕಾಲಾವಕಾಶ ನೀಡಬೇಕು” ಎಂದು ಮೌಖಿಕವಾಗಿ ಮನವಿ ಮಾಡಿದರು.
ಇದಕ್ಕೆ ಪೀಠವು “ನಿಯಮಗಳ ಪ್ರಕಾರ ತಾಂತ್ರಿಕ ಸಮಿತಿ ಮಗುವಿನ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿದೆ. ಮಗುವಿನ ಕ್ಷೇಮ ಪರಿಗಣಿಸಬೇಕಿರುವುದರಿಂದ ಚಿಕಿತ್ಸೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು. ಅಲ್ಲದೇ ಅಷ್ಟರೊಳಗೆ ಅಪರೂಪದ ಕಾಯಿಲೆಗಳ ತಾಂತ್ರಿಕ ಸಮಿತಿಯ ತೀರ್ಮಾನವನ್ನು ತಿಳಿಸುವಂತೆ ಸೂಚಿಸಿತು.